ತುಮಕೂರಿನಲ್ಲಿ ಅಮಾನವೀಯ ಘಟನೆ

ಸೋಮವಾರ, 3 ಅಕ್ಟೋಬರ್ 2022 (16:08 IST)
ಸ್ವಗ್ರಾಮಕ್ಕೆ ಮಗುವಿನ ಶವ ಸಾಗಿಸಲು ಹಣವಿಲ್ಲದೆ ತುಮಕೂರಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಬಾಣಂತಿ ಸೇರಿದಂತೆ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
 
ದಾವಣಗೆರೆ ಜಿಲ್ಲೆ ಗೋಪನಾಳ್ ಗ್ರಾಮದ ಮಂಜುನಾಥ್ ಮತ್ತು ಗೌರಮ್ಮ ದಂಪತಿ ತುಮಕೂರು ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ನಾಲ್ಕು ದಿನದ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಗೌರಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಇಂದು(ಸೋಮವಾರ) ಮುಂಜಾನೆ 4 ಗಂಟೆಯಲ್ಲಿ ಆಸ್ಪತ್ರೆಯಲ್ಲೇ ಮಗು ಮೃತಪಟ್ಟಿದೆ. ಮಗುವಿನ ಶವ ತೆಗೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ.
 
ಆದರೆ, ಮಗುವನ್ನ ಕಳೆದುಕೊಂಡ ನೋವು ಒಂದೆಡೆಯಾದರೆ, ಕಂದನ ಶವವನ್ನು ಊರಿಗೆ ತೆಗೆದುಕೊಂಡು ಹೋಗಲು ಹಣ ಇಲ್ಲದ ದುಸ್ಥಿತಿ ಒಂದೆಡೆ. 40 ಕಿಲೋ ಮೀಟರ್ ವ್ಯಾಪ್ತಿಗೆ ಮಾತ್ರವೇ ಆಂಬುಲೆನ್ಸ್ ನೀಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಖಾಸಗಿ ಆಂಬುಲೆನ್ಸ್​ನಲ್ಲಿ ಮಗುವಿನ ಶವ ತೆಗೆದುಕೊಂಡು ಹೋಗಲು ಅಶಕ್ತವಾಗಿರುವ ದಂಪತಿ. ಕೊನೆಗೆ ಬಸ್​ನಲ್ಲೇ ಹೋಗಲು ನಿರ್ಧರಿಸಿ, ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ ನೋವಿನಲ್ಲೇ ಬಂದಿದ್ದಾರೆ. ಇವರ ಜತೆಗೆ ಗೌರಮ್ಮರ ತಾಯಿಯೂ ಇದ್ದಾರೆ.
 
ಮೂವರು ಮಗುವಿನ ಶವವನ್ನು ಎತ್ತಿಕೊಂಡೇ ದಾವಣಗೆರೆ ಬಸ್​ ಹತ್ತಲು ಮುಂದಾಗಿದ್ದು, ಇದಕ್ಕೆ ಕಂಡಕ್ಟರ್ ಮತ್ತು ಚಾಲಕರು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ದಿಕ್ಕು ತೋಚದ ಕುಟುಂಬಸ್ಥರು ಕಣ್ಣೀರಿಡುತ್ತಲೇ ಬಸ್ ನಿಲ್ದಾಣದಲ್ಲೇ ಮಗುವಿನ ಶವ ಎತ್ತಿಕೊಂಡು ಕುಳಿತ್ತಿದ್ದ ಮನಕಲಕುವ ದೃಶ್ಯ ಕಂಡು ಬಂತು.
 
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ತುಮಕೂರು ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹನುಮಂತರಾಜು, ಮಗುವಿನ ಕುಟುಂಬಸ್ಥರಿಗೆ ಊರಿಗೆ ಹೋಗಲು ಕಾರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ