ತುಮಕೂರು: ಧರ್ಮಸ್ಥಳದ ಅನಾಮಿಕ ತಲೆಬುರುಡೆ ತಂದುಕೊಟ್ಟ ತಕ್ಷಣ ಆತನ ಬಗ್ಗೆ ಪೂರ್ವಪರ ವಿಚಾರಿಸದೆ, 164 ಹೇಳಿಕೆ ಪಡೆದು ಎಸ್‌ಐಟಿ ರಚಿಸಲಾಯಿತು. ತನಿಖೆಯ ಪ್ರಾರಂಭಿಕ ಹಂತದಲ್ಲಿ ಎಲ್ಲರು ಎಡವಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಅನಾಮಿಕ ಎಲ್ಲಿಂದ ಬುರುಡೆ ತಂದಿದ್ದರು, ಕಾನೂನು ಪ್ರಕಾರವೇ ಗುಂಡಿಯಿಂದ ಬುರುಡೆ ಹೊರ ತೆಗೆಯಲಾಗಿದೆಯೇ? ಎಂಬುವುದನ್ನು ಪರಿಶೀಲಿಸಿದ್ದರೆ ಇಷ್ಟೆಲ್ಲಾ ರಾದ್ಧಾಂತ ಆಗುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧವೇ ಅಸಮಧಾನ ವ್ಯಕ್ತಪಡಿಸಿದರು.
ಧರ್ಮಸ್ಥಳಕ್ಕೆ ಅಪಕೀರ್ತಿ ತರುವ ಪ್ರಯತ್ನ ನಡೆಯಿತು. ಕೆಲ ಏಜೆನ್ಸಿಗಳು ವಿನಾಕಾರಣ ಈ ವಿಚಾರವನ್ನು ಬಹಳ ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋದವು. ಕಂಡಲ್ಲಿ ಗುಂಡಿ ತೆಗೆದು ಅಲ್ಲಿನ ನಿವಾಸಿಗಳಿಗೆ ತೊಂದರೆ ನೀಡಲಾಯಿತು. ಪ್ರಾರಂಭದಲ್ಲಿ ಸಾಮಾನ್ಯ ಜ್ಞಾನ ಬಳಸಿದ್ದರೆ ಇದೆಲ್ಲ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಡಿಸಿಎಂ ಶಿವಕುಮಾರ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ಅವರು ಆರ್‌ಎಸ್‌ಎಸ್ ಗೀತೆ ಹಾಡಬಹುದು, ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಜತೆಗೆ ವೇದಿಕೆ ಹಂಚಿಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು. ನಾವು ಏನೂ ಮಾತಾಡುವಂತಿಲ್ಲ ಎಂದು ವ್ಯಂಗ್ಯವಾಡಿದರು.