ಮಹಾರಾಷ್ಟ್ರಕ್ಕೆ ನೀರು ಹರಿಸುವೆ ಎಂದ ಸಿಎಂ ವಿರುದ್ಧ ರೈತರ ಆಕ್ರೋಶ, ಅಹೋರಾತ್ರಿ ಧರಣಿ
ಶುಕ್ರವಾರ, 18 ಅಕ್ಟೋಬರ್ 2019 (11:41 IST)
ಬೆಂಗಳೂರು : ಮಹಾರಾಷ್ಟ್ರಕ್ಕೆ ನೀರು ಹರಿಸುವೆ ಎಂದ ಸಿಎಂ ಯಡಿಯೂರಪ್ಪ ಹೇಳಿಕೆಗೆ ಮಹಾದಾಯಿ ಹೋರಾಟಗಾರರು, ರೈತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆ ಪ್ರಚಾರದ ವೇಳೆ ಸಿಎಂ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ನೀರು ಹರಿಸುವ ಭರವಸೆ ನೀಡಿದ್ದಾರೆ. ಅವರ ಈ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದ್ದು, ಬಿಎಸ್ ವೈ ಸಿಎಂ ಆಗಿರೋದು ಕರ್ನಾಟಕಕ್ಕೋ? ಇಲ್ಲಾ ಮಹಾರಾಷ್ಟ್ರಕ್ಕೋ? ಕರ್ನಾಟಕದಲ್ಲೇ ಕುಡಿಯಲು ನೀರಿಲ್ಲ, ಮಹಾರಾಷ್ಟ್ರಕ್ಕೆ ನೀರು ಹರಿಸ್ತಾರಂತೆ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.
ಅಲ್ಲದೇ ಈಗಾಗಲೇ ಕರ್ನಾಟಕ ರಾಜ್ಯ ಸೇನಾ ಸಂಘಟನೆ ನೇತೃತ್ವದಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಮಹದಾಯಿ ಕಳಸಾ ಬಂಡೂರಿ ಅಧಿಸೂಚನೆ ಒತ್ತಾಯಿಸಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಇದನ್ನೆಲ್ಲಾ ನೋಡಿದರೆ ಚುನಾವಣಾ ರಾಜಕೀಯದಲ್ಲಿ ಸಿಎಂ ರಾಜ್ಯ ರೈತರ ಕೂಗು ಮರೆತರಾ? ಎಂಬ ಅನುಮಾನ ವ್ಯಕ್ತವಾಗಿದೆ.