ಪರಿಹಾರಕ್ಕಾಗಿ ಉಳುಮೆ ಬಿಟ್ಟು ಕಂಬ ಕಾಯುತ್ತಿರುವ ರೈತರು

ಮಂಗಳವಾರ, 21 ಆಗಸ್ಟ್ 2018 (15:06 IST)
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ರೈತರು ಈಗಾಗಲೇ ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಜಮೀನನ್ನು ಹದ ಮಾಡಿ ಬಿತ್ತನೆ ಆರಂಭಿಸಿದ್ದಾರೆ. ಆದ್ರೆ ಆ ತಾಲೂಕಿನ  ರೈತರು ಉಳುಮೆಯನ್ನ ಬಿಟ್ಟು ಪ್ರತಿನಿತ್ಯ ಹೈ ಟೆನ್ಷನ್ ವಿದ್ಯುತ್ ಗೋಪುರಗಳನ್ನೇರಿ ಕುಳಿತು ಪ್ರತಿಭಟನೆ ನಡೆಸುವಂತಾಗಿದೆ.

ಪವರ್ ಗ್ರಿಡ್ ಎಂಬ ಸಂಸ್ಥೆಯು ಕೇಂದ್ರ ಸರ್ಕಾರದ ಆದೇಶದಂತೆ ಬೆಂಗಳೂರು ಹೊರವಲಯ ಆನೇಕಲ್ ನ ರೈತರ ಜಮೀನಿನಲ್ಲಿ ಹೈ ಟೆನ್ಷನ್ ಕಂಬಗಳನ್ನು ಹಾಕುವುದಕ್ಕೆ ಮುಂದಾಗಿದೆ. ಆದರೆ ರೈತರಿಗೆ ಸರಿಯಾದ ಪರಿಹಾರ ನೀಡಿಲ್ಲವೆಂದು ಬಹಳ ದಿನಗಳಿಂದ ಪ್ರತಿಭಟನೆ ನಡೆಸುತ್ತಲ್ಲೇ ಅಲ್ಲಿನ ರೈತರು ಬರುತ್ತಿದ್ದಾರೆ.

ಆನೇಕಲ್ ತಾಲೂಕಿನ ಕಾಳನಾಯಕನಹಳ್ಳಿ, ವಣಕನಹಳ್ಳಿ ಸುತ್ತಮುತ್ತಲಿನ ಗ್ರಾಮದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪವರ್ ಗ್ರಿಡ್ ಕಂಪನಿಯವರು ಮಾತ್ರ ಪೊಲೀಸರ ರಕ್ಷಣೆಯಲ್ಲಿ ರೈತರ ಜಮೀನಿನಲ್ಲಿ ಮತ್ತೆ ಕಾಮಗಾರಿಯನ್ನು ಆರಂಭಿಸಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ  ರೈತರು ವಿದ್ಯುತ್ ಗೋಪುರ ಏರಿ ಪ್ರತಿಭಟನೆ ನಡೆಸಿದ್ದು, ರೈತರ ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಎ. ನಾರಾಯಣ ಸ್ವಾಮಿ ಆಗಮಿಸಿ ಬೆಂಬಲ ಸೂಚಿಸಿದ್ರು. ಕೊನೆಗೆ ಪೊಲೀಸರು ಮಾಜಿ ಸಚಿವರನ್ನು ಸೇರಿದಂತೆ 150ಕ್ಕೂ ಹೆಚ್ಚು ರೈತರನ್ನು ಬಂಧಿಸಿ ಕರೆದೊಯ್ದರು. ಆ ಬಳಿಕ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ‌ ಸಚಿವ ಎ.ನಾರಾಯಣಸ್ವಾಮಿ, ರೈತರಿಗೆ ಕೂಡಲೇ ಸರಿಯಾದ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರದ ಜೊತೆ ಸಿಎಂ ಮಾತನಾಡದೆ ಹೋದರೆ ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ