ಮಂಗಳೂರು: ನಗರದಲ್ಲಿ ಸುಮಾರು 7,500 ಕೋಟಿ ರು. ಹೂಡಿಕೆಯಲ್ಲಿ ರಸಗೊಬ್ಬರ ಕಾರ್ಖಾನ ಆರಂಭಿಸುವ ಸಿದ್ಧತೆ ನಡೆಯುತ್ತಿದ್ದು, ಇದರಿಂದ 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ದೊರಕಲಿದೆ. ನವೆಂಬರ್ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮ್ಮೇಳನಕ್ಕಿಂತ ಮೊದಲೇ ಇದರ ಕಾರ್ಯಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಗರದ ಹೋಟೆಲ್ ಓಷಿಯನ್ ಪರ್ಲ್‌ನಲ್ಲಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕರ್ನಾಟಕ ಮೆರಿಟೈಮ್ ಬೋರ್ಡ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ಕರ್ನಾಟಕ ಕೋಸ್ಟ್‌ಲೈನ್ ಬಿಜಿನೆಸ್ ಮತ್ತು ಮೆರಿಟೈಮ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಕೈಗಾರಿಕೆಗಳ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಗ್ರಾ.ಪಂ.ನಿಂದ ಪಾಲಿಕೆ ವರೆಗೆ ವಿವಿಧ ಸ್ಥಳಿಯ ಸಂಸ್ಥೆಗಳು ಕಿರುಕುಳ ನೀಡುತ್ತಿರುವ ಕುರಿತಂತೆ ದೂರುಗಳು ಬಂದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪಾವತಿ ವ್ಯವಸ್ಥೆ ಸರಳೀಕರಣ ಮಾಡಲಾಗುವುದು ಎಂದು ಅವರು ಹೇಳಿದರು.
ಮೆರಿಟೈಮ್ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಡಿಯೊ ಸಂದೇಶ ನೀಡಿ, 360 ಕಿ.ಮೀ. ವ್ಯಾಪ್ತಿಯ ಕರಾವಳಿ ಪ್ರದೇಶ ಅಭಿವೃದ್ಧಿಗೆ ಎಂಟು ಸಾವಿರ ಕೋಟಿ ರು. ಮೊತ್ತದ ಸಾಗರಮಾಲಾ ಯೋಜನೆ ಅನುಷ್ಠಾನಕ್ಕೆ ಬರುತ್ತಿದ್ದು, ಅದರಲ್ಲಿ ಪ್ರವಾಸಿ ಬಂದರು ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದರು.
ಗುಜರಾತ್, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳ ಪ್ರವಾಸಿಗರನ್ನು ಬಂದರು ಮೂಲಕ ಆಕರ್ಷಿಸುವ ಪ್ರಯತ್ನ ಮಾಡಲಾಗುವುದು.