ಗಾಲಿ ಜನಾರ್ದನ ರೆಡ್ಡಿ ಮೇಲೆ ಎಫ್ಐ.ಆರ್

ಗುರುವಾರ, 27 ಜನವರಿ 2022 (19:21 IST)
ಕೋರ್ಟ್​ ಆದೇಶದಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಆಪ್ತ ಕಾರ್ಯದರ್ಶಿ ಮೆಹಫೂಜ್ ಅಲಿ ಖಾನ್ ಹಾಗೂ ಓಬಳಾಪುರಂ ಮೈನಿಂಗ್ ಕಂಪನಿ ಮತ್ತು ಶ್ರೀಮಿನರಲ್ಸ್ ಪಾಲುದಾರ ಬಿ.ವಿ ಶ್ರೀನಿವಾಸ ರೆಡ್ಡಿ ವಿರುದ್ಧ ಗಣಿ ಮತ್ತು ಖನಿಜ ನಿಯಂತ್ರಣಗಳ ಕಾಯ್ದೆಯ ಸೆಕ್ಷನ್ 21, 23 ಹಾಗೂ 4(1) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಲಾಗಿದೆ.
ಕಬ್ಬಿಣದ ಅದಿರು ಅಕ್ರಮವಾಗಿ ಮಾರಾಟ ಮಾಡಿದ ಹಾಗೂ ಸರ್ಕಾರಕ್ಕೆ ರಾಯಲ್ಟಿ ಹಾಗೂ ಇತರೆ ತೆರಿಗೆಗಳನ್ನು ನೀಡದೆ ವಂಚಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
 
ತನಿಖಾಧಿಕಾರಿ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದ (63ನೇ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್) ನ್ಯಾಯಾಧೀಶ ಪ್ರೀತ್ ಜೆ ಈ ಆದೇಶ ಹೊರಡಿಸಿದ್ದಾರೆ.
 
ಆದೇಶದಲ್ಲಿ, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಆಪ್ತ ಕಾರ್ಯದರ್ಶಿ ಮೆಹಫೂಜ್ ಅಲಿ ಖಾನ್ ಹಾಗೂ ಓಬಳಾಪುರಂ ಮೈನಿಂಗ್ ಕಂಪನಿ ಮತ್ತು ಶ್ರೀಮಿನರಲ್ಸ್ ಪಾಲುದಾರ ಬಿ.ವಿ ಶ್ರೀನಿವಾಸ ರೆಡ್ಡಿ ವಿರುದ್ಧ ಗಣಿ ಮತ್ತು ಖನಿಜ ನಿಯಂತ್ರಣಗಳ ಕಾಯ್ದೆಯ ಸೆಕ್ಷನ್ 21, 23 ಹಾಗೂ 4(1) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಲಾಗಿದೆ.
 
2009 ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆರೋಪಿತರ ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಅಕ್ರಮವಾಗಿ ಕಬ್ಬಿಣದ ಅದಿರು ತೆಗೆದು ಸಾಗಿಸಿರುವುದು ಪತ್ತೆಯಾಗಿತ್ತು. ಆರೋಪಿತರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ಸಾವಿರಾರು ಮೆಟ್ರಿಕ್ ಟನ್ ಅದಿರು ಮಾರಾಟ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 23,89,650 ರೂಪಾಯಿ ನಷ್ಟವಾಗಿದೆ ಎಂದು ತನಿಖಾಧಿಕಾರಿ ಆರೋಪಿಸಿದ್ದರು. ಅಲ್ಲದೇ, 2015 ರಲ್ಲಿ ಆರೋಪಿತರ ವಿರುದ್ಧ ಭಾರತೀಯ ದಂಡ ಸಂಹಿತೆ 379, 409, 420, 468 ಹಾಗೂ 471 ಅಡಿ ದಾಖಲಿಸಿರುವ ಪ್ರಕರಣಕ್ಕೂ ಪಿಸಿಆರ್ ಗೂ ಪರಸ್ಪರ ಸಂಬಂಧವಿದೆ ಎಂದಿದ್ದ ತನಿಖಾಧಿಕಾರಿ, ಪ್ರಕರಣದ ದೋಷಾರೋಪ ಪಟ್ಟಿಯನ್ನೂ ಪಿಸಿಆರ್ ಜತೆ ಲಗತ್ತಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ