ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಐವರ ಮೇಲೆ ಕೇಸ್ ದಾಖಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ಹೋಂ ಕ್ವಾರಂಟೈನ್ ಇದ್ದು, ಕೋವಿಡ್-19 ರೋಗ ಪತ್ತೆ ಪರೀಕ್ಷೆಗಾಗಿ ಗಂಟಲು ದ್ರವವನ್ನು ನೀಡಿ ಮನೆಯಲ್ಲಿಯೇ ಇರದೆ ಹೊರಗೆ ಸುತ್ತಾಡಿ ನಿಯಮ ಉಲ್ಲಂಘಿಸಿದ ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದ ಇಬ್ಬರು, ಬೆಳವಟಗಿ, ತತ್ವಣಗಿ ಹಾಗೂ ಮುಂಡವಾಡ ಗ್ರಾಮದ ತಲಾ ಓರ್ವ ಸೇರಿದಂತೆ ಒಟ್ಟು 5 ಜನರ ಮೇಲೆ ರಾಷ್ಟ್ರೀಯ ವಿಪತ್ತು ಸುರಕ್ಷತಾ ಕಾಯ್ದೆ ಅಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರೂ ಕೆಲವರು ನಿಯಮ ಉಲ್ಲಂಘಿಸುತ್ತಿದ್ದಾರೆ. ಹೋಂ ಕ್ವಾರಂಟೈನ್ ಇದ್ದು, ಗಂಟಲು ದ್ರವ ಮಾದರಿ ನೀಡಿ ವರದಿ ಬರುವ ಮುನ್ನವೇ ಮನೆಯಿಂದ ಹೊರಗೆ ಸುತ್ತಾಡುತ್ತಿದ್ದಾರೆ. ಇಂಥವರ ಮೇಲೆ ಇನ್ನು ಮುಂದೆ ಎಫ್‌ಐಆರ್ ದಾಖಲಿಸಲಾಗುವುದು ಎಂದಿದ್ದಾರೆ.