ಪಟಾಕಿ ಸಿಡಿದು 8 ಮಕ್ಕಳ ಕಣ್ಣಿಗೆ ಹಾನಿ

ಭಾನುವಾರ, 7 ನವೆಂಬರ್ 2021 (11:40 IST)
ಬೆಂಗಳೂರು : ನಗರದಲ್ಲಿ ನಡೆದ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವಾಗ ಎಂಟು ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಎರಡು, ನಾರಾಯಣ ನೇತ್ರಾಲಯದಲ್ಲಿ ನಾಲ್ಕು ಹಾಗೂ ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಒಂದು ಪ್ರಕರಣ ಗುರುವಾರ ಒಂದೇ ದಿನದಲ್ಲಿ ವರದಿಯಾಗಿವೆ. ಭಾನುವಾರವಷ್ಟೇ ಪಟಾಕಿ ಹಚ್ಚುತ್ತಿದ್ದುದನ್ನು ನೋಡುತ್ತಾ ನಿಂತಿದ್ದ 10 ವರ್ಷದ ಬಾಲಕನ ಕಣ್ಣುಗಳಿಗೆ ಕಿಡಿ ಹಾರಿ ಗಾಯವಾಗಿದೆ. ತಕ್ಷಣಕ್ಕೆ ಹತ್ತಿರದ ಕ್ಲಿನಿಕ್ನಲ್ಲಿ ಚಿಕಿತ್ಸೆ ಕೊಡಿಸಿ, ಗುರುವಾರ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಾಲಕ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.
ದೊಡ್ಡಕಲ್ಲಸಂದ್ರದ 6 ವರ್ಷದ ಬಾಲಕ ಯುವರಾಜ್ ಫ್ಲವರ್ ಪಾಟ್ ಸಿಡಿಸುವಾಗ ಗಾಯಗೊಂಡಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾರಾಯಣ ನೇತ್ರಾಲಯದಲ್ಲಿ ಆರು ವರ್ಷದ ಬಾಲಕಿ, 8 ಮತ್ತು 11 ವರ್ಷದ ಇಬ್ಬರು ಬಾಲಕರು ಹಾಗೂ 40 ವರ್ಷದ ಪುರುಷನೊಬ್ಬ ಚಿಕಿತ್ಸೆ ಪಡೆದಿದ್ದಾರೆ. ಅದೃಷ್ಟವಶಾತ್ ಯಾರಿಗೂ ದೊಡ್ಡ ಸಮಸ್ಯೆಯಾಗಿಲ್ಲ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ ತಿಳಿಸಿದ್ದಾರೆ. ಬನಶಂಕರಿಯ 13 ವರ್ಷದ ಬಾಲಕನೊಬ್ಬ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತು ತೆರಳುತ್ತಿರುವಾಗ ಪಟಾಕಿಯ ಕಿಡಿಯೊಂದು ಕಣ್ಣಿಗೆ ಬಡಿದಿದೆ. ಕೂಡಲೇ ಬಾಲಕನನ್ನು ಚಿಕ್ಕಕಲ್ಲಸಂದ್ರದ ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕ ಅಪಾಯದಿಂದ ಪಾರಾಗಿದ್ದಾನೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ