ಬೆಂಗಳೂರು: ಈ ಬಾರಿಯ ಪಿಯು ಪರೀಕ್ಷೆಯಲ್ಲಿ 5,46,698 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಕರ್ನಾಟಕಕ್ಕೆ ಮೊದಲ ಬಾರಿ ಶೇ.86.48 ಫಲಿತಾಂಶ ಬಂದಿದ್ದು, ಇದು ಐತಿಹಾಸಿಕ ದಿನ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಖುಷಿ ವ್ಯಕ್ತಪಡಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 6,32,200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,46,698 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಪೈಕಿ 2,32,928 ( 83.65%) ಬಾಲಕರು, 3,13,770 (88.70%) ಬಾಲಕಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದರು.
ಕಲಾ ವಿಭಾಗದಲ್ಲಿ 98,310 (72.86%) ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,82,317(88.04%) ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 2,66,071( 86.48%) ಉತ್ತೀರ್ಣರಾಗಿದ್ದಾರೆ. ಈ ಪೈಕಿ ನಗರ ವಿಭಾಗದಲ್ಲಿ 3,71,853 (85.95%) ಮಕ್ಕಳು, ಗ್ರಾಮೀಣ ವಿಭಾಗದ 1,74,845 (87.62%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಮಕ್ಕಳಿಗೆ ಫಲಿತಾಂಶ ಮೊದಲು ಕೊಡಬೇಕು ಅಂತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟ ಮಾಡಿದ್ದೇವೆ. ಅಂಕಪಟ್ಟಿ ಕೂಡ ಇಂದೇ ಲಭ್ಯವಾಗಿದೆ. ಡಿಜಿ ಲಾಕರ್‌ನಲ್ಲೂ ಅಂಕಪಟ್ಟಿ ಸಿಗಲಿದೆ.
ರಾಜ್ಯದಲ್ಲಿ ಫಸ್ಟ್ ಟೈಮ್ 86.48% ಫಲಿತಾಂಶ ಬಂದಿದ್ದು, ಮೊದಲು ಮಕ್ಕಳಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ.