ಬೆಂಗಳೂರು : ಚುನಾವಣೆ ಸನಿಹದಲ್ಲಿ ಟಿಕೆಟ್ ಪಾಲಿಟಿಕ್ಸ್ ಜೋರಾಗಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಪ್ರಕಟಿಸುವ ಸಾಧ್ಯತೆಯಿದೆ.
ಕಳೆದ ವಾರ ಬೆಂಗಳೂರಿನ ಹೋಟೆಲ್ನಲ್ಲಿ ಸ್ಕ್ರೀನಿಂಗ್ ಕಮಿಟಿ ಸದಸ್ಯರು, ಸಿದ್ದರಾಮಯ್ಯ , ಡಿಕೆಶಿ ಜೊತೆಗೂಡಿ 170 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರು ಮಾಡಿ ದೆಹಲಿಗೆ ಕಳಿಸಿಕೊಟ್ಟಿದ್ದರು.
ಈ ಬಗ್ಗೆ ವಿದೇಶದಿಂದ ಮೊನ್ನೆ ಬಂದಿಳಿದ ರಾಹುಲ್ ಗಾಂಧಿ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸರಣಿ ಸಭೆ ನಡೆಸಿ ಮೊದಲ ಪಟ್ಟಿಯನ್ನು ಫೈನಲ್ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಿಂಗಲ್ ಹೆಸರು ಅಖೈರು ಮಾಡಲಾಗಿದೆ. ತೀವ್ರ ಸ್ಪರ್ಧೆ ಇರುವ ಕ್ಷೇತ್ರಗಳಿಗೆ ಎರಡೆರೆಡು ಹೆಸರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ.
ಇಂದು ನಡೆಯಲಿರುವ ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಂತಿಮವಾಗಿ ಚರ್ಚಿಸಿ ಪಟ್ಟಿಯನ್ನು ರಿಲೀಸ್ ಮಾಡಲು ಹೈಕಮಾಂಡ್ ಮುಂದಾಗಿದೆ. ರಾಜ್ಯ ಉಸ್ತುವಾರಿ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಲವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.