ಮೊದಲ ಓಮಿಕ್ರಾನ್ ರೋಗಿ ರಾಜ್ಯದಿಂದ ಪರಾರಿ: ತನಿಖೆಗೆ ಸಿಎಂ ಬೊಮ್ಮಾಯಿ ಸರ್ಕಾರ ಆದೇಶ
ಶನಿವಾರ, 4 ಡಿಸೆಂಬರ್ 2021 (20:50 IST)
ಬೆಂಗಳೂರು: ಓಮಿಕ್ರಾನ್ ರೂಪಾಂತರಿ ತಗುಲಿರುವ ಮೊದಲ ರೋಗಿಯು ರಾಜ್ಯದಿಂದ ಪರಾರಿಯಾಗಿದ್ದಾನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಹೇಳಿದೆ.
ಖಾಸಗಿ ಲ್ಯಾಬ್‌ನವರು ಕೊರೊನಾ ನೆಗೆಟಿವ್ ವರದಿಯನ್ನು ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ಭಾರತದಲ್ಲಿ ಒಮಿಕ್ರಾನ್ ರೂಪಾಂತರದ ಮೊದಲ ಪ್ರಕರಣಗಳ ಕುರಿತು ಆರೋಗ್ಯ ಸಚಿವಾಲಯ ಗುರುವಾರ ಮಾಹಿತಿ ನೀಡಿದ್ದು, ಎರಡೂ ಪ್ರಕರಣಗಳು ಕರ್ನಾಟಕದಿಂದ ವರದಿಯಾಗಿದ್ದವು.
ಶಾಂಗ್ರಿಲಾ ಹೋಟೆಲ್‌ನಲ್ಲಿ ಏನು ತಪ್ಪಾಗಿದೆ ಎಂಬುದನ್ನು ತಿಳಿಯಲು ನಾವು ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಕರ್ನಾಟಕ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಮೊದಲ ರೋಗಿ 66 ವರ್ಷ ವಯಸ್ಸಿನವರಾಗಿದ್ದು, ನವೆಂಬರ್ 20 ರಂದು ದಕ್ಷಿಣ ಆಫ್ರಿಕಾದಿಂದ ರಾಜ್ಯಕ್ಕೆ ಬಂದಿದ್ದರು. ಅವರು ಏಳು ದಿನಗಳ ನಂತರ ಭಾರತವನ್ನು ತೊರೆದಿದ್ದಾರೆ ಎಂದು ಕರ್ನಾಟಕ ಸರ್ಕಾರವು ಮಾಹಿತಿ ನೀಡಿದೆ.
ರೋಗಿಯ ಪ್ರಯಾಣದ ಇತಿಹಾಸದ ವಿವರ:
1. ದಕ್ಷಿಣ ಆಫ್ರಿಕಾದಿಂದ ನೆಗೆಟಿವ್ ವರದಿಯೊಂದಿಗೆ 20/11/2021 ರಂದು ಪ್ರಯಾಣಿಸಿದ್ದಾರೆ ಮತ್ತು ಅವರನ್ನು KIA ಬೆಂಗಳೂರಿನಲ್ಲಿ ಪರೀಕ್ಷಿಸಲಾಯಿತು.
2. ಅವರು ಆಗಮಿಸಿದ ನಂತರ 20/11/2021 ರಂದು ಹೋಟೆಲ್‌ನಲ್ಲಿ ಇರಿಸಲಾಗಿದ್ದು, ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿದೆ.
3. ಯುಪಿಐ-ಐಸಿ ವೈದ್ಯರು ಅವರಿಗೆ ಚಿಕಿತ್ಸೆ ನೀಡಲು ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ಆದರೆ ಅಲ್ಲಿ ಅವರಿಗೆ ರೋಗದ ಯಾವುದೇ ಲಕ್ಷಣಗಳಿರಲಿಲ್ಲ. ಹಾಗಾಗಿ ಸ್ವಯಂ -ಐಸೋಲೇಟ್ ಆಗಲು ಸೂಚಿಸಿದ್ದಾರೆ.
4. 22/11/2021 ರಂದು, ಅವರ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಿ BBMP ಮೂಲಕ ಜೀನೋಮಿಕ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ.
5. ರೋಗಿಯು 23/11/2021 ರಂದು ಖಾಸಗಿ ಲ್ಯಾಬ್‌ನಲ್ಲಿ ಅವರು ಸ್ವಯಂ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಎಂದು ಬಂದಿದೆ.
6. 24 ಜನ ಈ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದ್ದು, ಎಲ್ಲರೂ ಲಕ್ಷಣರಹಿತರಾಗಿದ್ದಾರೆ. ಎಲ್ಲಾರ ವರದಿ ನೆಗೆಟಿವ್ ಬಂದಿದೆ.
7. 22 ಮತ್ತು 23 ರಂದು, UPHC ತಂಡವು 240 ದ್ವಿತೀಯ ಸಂಪರ್ಕಿತರ ಮಾದರಿಗಳನ್ನು ಸಂಗ್ರಹಿಸಿದೆ ಮತ್ತು ಎಲ್ಲಾರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
8. ಮೇಲಿನ ವ್ಯಕ್ತಿ ನವೆಂಬರ್ 27 ರ ಮಧ್ಯರಾತ್ರಿ ಚೆಕ್ ಔಟ್ ಮಾಡಿ ವಿಮಾನ ನಿಲ್ದಾಣಕ್ಕೆ ಕ್ಯಾಬ್ ತೆಗೆದುಹೋಗಿದ್ದಾರೆ. ನಂತರ ದುಬೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.