ವಿಮಾನ ಕಾರ್ಯಾಚರಣೆ: ಬಿಸಿಲೂರಿಗೆ ಆಗಮಿಸಿದ ಬಿಸಿಎಎಸ್ ಭದ್ರತಾ ಸಮಿತಿ
ಶನಿವಾರ, 10 ನವೆಂಬರ್ 2018 (14:02 IST)
ನೂತನ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆ ಆರಂಭಿಸುವ ಸಂಬಂಧ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು ನಾಗರಿಕ ವಿಮಾನಯಾನ ಸಚಿವಾಲಯದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೋಸೈಟಿಯ ಹೈದ್ರಾಬಾದಿನ ಪ್ರಾದೇಶಿಕ ನಿರ್ದೇಶಕ ಎಂ.ಟಿ.ಬೇಗ್ ಅವರ ನೇತೃತ್ವದ ಭದ್ರತಾ ಸಮಿತಿ ಕಲಬುರಗಿಗೆ ಆಗಮಿಸಿದೆ.
ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಸಮಿತಿ ಸದಸ್ಯರು, ಭದ್ರತೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೋಸೈಟಿಯ ಹೈದ್ರಾಬಾದಿನ ಪ್ರಾದೇಶಿಕ ನಿರ್ದೇಶಕ ಎಂ.ಟಿ.ಬೇಗ್, ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಭದ್ರತಾ ಸಮಿತಿಯಿಂದ ನಿರಾಕ್ಷೇಪಣಾ ಪತ್ರ ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ಸಲ್ಲಿಸಿದ ನಂತರವೆ ವಾಣಿಜ್ಯ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ದಳ, ಶ್ವಾನ ದಳ, ಅಗ್ನಿಶಾಮಕ ದಳ, ಸ್ಫೋಟಕ ವಸ್ತುಗಳ ಪತ್ತೆ ಘಟಕ, ವಿಮಾನ ನಿಲ್ದಾಣದ ಸಮಗ್ರ ಭದ್ರತೆ ಸೇರಿದಂತೆ ಡಿ.ಜಿ.ಸಿ.ಎ. ಚೆಕ್‍ಲಿಸ್ಟ್‍ನಲ್ಲಿ ನಿಗದಿಪಡಿಸಿರುವ ಇನ್ನೀತರ ಎಲ್ಲಾ ಅಗತ್ಯ ಭದ್ರತಾ ಕ್ರಮಗಳು ಕೈಗೊಳ್ಳಲೆಬೇಕು. ವಿಮಾನ ನಿಲ್ದಾಣಕ್ಕೆ ಭದ್ರತೆ ಕಲ್ಪಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿರುತ್ತದೆ ಎಂದರು. ನಂತರ ಸಮಿತಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿತು.