ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಧ್ಯಮ ಹೇಳಿಕೆ

ಸೋಮವಾರ, 1 ನವೆಂಬರ್ 2021 (20:58 IST)
ಎರಡೂ ಉಪಚುನಾವಣಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಹೇಳಿಕೊಳ್ಳಲು ತಮ್ಮ ಸರ್ಕಾರ ಯಾವ ಸಾಧನೆಯನ್ನು ಮಾಡದ ಕಾರಣಕ್ಕಾಗಿ ಬಿಜೆಪಿಯವರು ದೊಡ್ಡ ಪ್ರಮಾಣದಲ್ಲಿ ಹಣ ಹಂಚಿದ್ದಾರೆ. ಆದರೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ.
 
ಉಪಚುನಾವಣೆ ಫಲಿತಾಂಶ ಮುಂಬರುವ ಚುನಾವಣೆಯ ದಿಕ್ಸೂಚಿಯೇನಲ್ಲ. ಜನರಿಗೆ ಸರ್ಕಾರದ ಆಡಳಿತದ ಬಗ್ಗೆ ಅಸಮಧಾನವಿದೆ. ಬಸವರಾಜ ಬೊಮ್ಮಾಯಿ ಅವರು ಪಕ್ಕದ ಕ್ಷೇತ್ರದವರಾಗಿದ್ದೂ ಕೂಡ ಹಾನಗಲ್ ಕ್ಷೇತ್ರದಲ್ಲಿ ಯಾವುದೇ ಕೆಲಸಗಳನ್ನು ಮಾಡಿಲ್ಲ. ಈ ವರೆಗೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಇದರಿಂದ ಜನ ಬೇಸತ್ತಿದ್ದಾರೆ. ಇದು ಬರೀ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದಲ್ಲ, ಇಡೀ ರಾಜ್ಯದಲ್ಲಿ ಇದೇ ಪರಿಸ್ಥಿತಿ ಇದೆ. ಹಾನಗಲ್ ಮತ್ತು ಸಿಂಧಗಿಯಲ್ಲಿ ಹತ್ತು ದಿನ ಪ್ರಚಾರ ಮಾಡಿದ್ದೇನೆ. ಎಲ್ಲಾ ಕಡೆಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. 
 
ಜೆಡಿಎಸ್ - ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಎರಡೂ ಕಡೆ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಮುಸ್ಲಿಂ ಮತಗಳನ್ನು ವಿಭಜನೆ ಮಾಡಬೇಕು ಎಂಬುದು ಅವರ ಉದ್ದೇಶ. ಈ ಮೂಲಕ ಬಿಜೆಪಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಮಾತ್ರ ಅವರ ಎದುರಾಳಿ. ಕಾಂಗ್ರೆಸ್ ಸೋಲಿಸಿದರೆ ತಮಗೆ ಲಾಭವಿದೆ ಎಂಬುದು ಜೆಡಿಎಸ್ ಲೆಕ್ಕಾಚಾರ, ಅದು ಅವರ ಮೂರ್ಖತನ. ಅಲ್ಪಸಂಖ್ಯಾತರು ಬುದ್ದಿವಂತರಿದ್ದಾರೆ, ಜೆಡಿಎಸ್ ಗೆ ಮತ ನೀಡಿದರೆ ಬಿಜೆಪಿಗೆ ಮತ ಹಾಕಿದಂತೆ ಎಂಬುದು ಅವರಿಗೂ ತಿಳಿದಿದೆ.
 
ಪೆಟ್ರೋಲ್ ಮೇಲೆ 35%, ಡೀಸೆಲ್‌ ಮೇಲೆ 24% ರಾಜ್ಯ ಸರ್ಕಾರ ಮಾರಾಟ ತೆರಿಗೆ ಹಾಕುತ್ತಿದೆ, ಇದರ ಜೊತೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆ, ಡೀಸೆಲ್‌ ಮೇಲೆ 31 ರೂಪಾಯಿ 84 ಪೈಸೆ ಅಬಕಾರಿ ಸುಂಕ ಹಾಕುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಮೇಲೆ 3 ರೂಪಾಯಿ 45 ಪೈಸೆ, ಪೆಟ್ರೋಲ್ ಮೇಲೆ 9 ರೂಪಾಯಿ 21 ಪೈಸೆ ಇತ್ತು. ಸುಮಾರು ಹತ್ತು ಪಟ್ಟು ಕೇಂದ್ರದ ತೆರಿಗೆ ಹೆಚ್ಚಾಗಿದೆ. ಇದನ್ನು ಕೇಂದ್ರ ಸರ್ಕಾರ ಕಡಿಮೆ ಮಾಡದೆ, ಬರೀ ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡೋದರಿಂದ ಹೆಚ್ಚಿನ ಲಾಭವಾಗಲ್ಲ. ಕೇಂದ್ರ ಸರ್ಕಾರ 50% ಹಾಗೂ ರಾಜ್ಯ ಸರ್ಕಾರ 25% ತೆರಿಗೆ ಇಳಿಕೆ ಮಾಡಿದರೆ ಜನರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗಲಿದೆ.
 
ಜೆಡಿಎಸ್ ನಲ್ಲಿ ಉಸಿರುಕಟ್ಟುವ ವಾತಾವರಣ ನಿರ್ಮಾಣವಿದ್ದಾಗ ಇತರೆ ಮುಖಂಡರು ರಾಜಕೀಯ ಮಾಡೋದು ಹೇಗೆ? ನಾವು ಯಾರನ್ನು ಒತ್ತಾಯಪೂರ್ವಕವಾಗಿ ಕರೆಯುತ್ತಿಲ್ಲ, ಹಿಂದೊಮ್ಮೆ ಶ್ರೀನಿವಾಸ್ ಅವರನ್ನು ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಗೆ ಸೇರುವಂತೆ ಕರೆದಾಗ ಬರಲ್ಲ ಎಂದಿದ್ದರು. ಈಗಿನ್ನೂ ಕರೆದಿಲ್ಲ, ಕರೆದ ಮೇಲೆ ಏನು ಹೇಳ್ತಾರೆ ನೋಡಬೇಕು. ಕಾಂಗ್ರೆಸ್ ನ ತತ್ವ ಸಿದ್ದಾಂತ ಒಪ್ಪಿ ಬರುವವರಿಗೆ ಸದಾ ಪಕ್ಷದ ಬಾಗಿಲು ತೆರೆದಿರುತ್ತದೆ. 
 
ಕುಮಾರಸ್ವಾಮಿ ಅವರು ಗುಬ್ಬಿಯಲ್ಲಿ ಸಭೆ ನಡೆಸಿ ಶ್ರೀನಿವಾಸ್ ಅವರನ್ನು ಹೊರಹಾಕಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸಭೆಗೆ ಶ್ರೀನಿವಾಸ್ ಅವರನ್ನು ಕರೆದಿದ್ರಾ? ನಾಲ್ಕು ಬಾರಿ ಶಾಸಕರಾದವರನ್ನು ಕಾಲು ಕಸದಂತೆ ಕಂಡರೆ ಅವರಾದ್ರೂ ಏನು ಮಾಡಬೇಕು? ಜೆಡಿಎಸ್ ನವರು ಉಪಯೋಗಿಸಿಕೊಂಡು ನಂತರ ಬಿಸಾಕುತ್ತಾರೆ. ನನ್ನನ್ನೂ ಪಕ್ಷದಿಂದ ಹೊರಹಾಕಿದ್ದರು. 
ನಾನು ಜೆಡಿಎಸ್ ಗೆ ರಾಜೀನಾಮೆ ನೀಡಿ ಹೊರಬಂದೆ ಎಂಬ ತಪ್ಪು ಕಲ್ಪನೆ ಇವತ್ತಿಗೂ ಇದೆ, ಸತ್ಯ ವಿಚಾರವೆಂದರೆ ನನ್ನನ್ನ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಆಗ ನಾನು ಅಹಿಂದ ಸಂಘಟನೆ ಆರಂಭಿಸಿದ್ದೆ. ಜನರನ್ನು ಹಣ್ಣು ತಿಂದು ಸಿಪ್ಪೆ ಬಿಸಾಕಿದಂತೆ ಉಪಯೋಗಿಸಿಕೊಳ್ಳೋದು ದೇವೇಗೌಡರ ಪ್ರವೃತ್ತಿ.
 
ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಬೇಡ ಎಂದು ದೇವೇಗೌಡರು ನನಗೆ ಹೇಳಿದ್ದರು. ಆಗ ನಾನು ಅಹಿಂದ ಸಮಾವೇಶ ಮಾಡುವುದರಿಂದ ನಿಮಗೆ ತೊಂದರೆ ಏನು? ಪಕ್ಷಕ್ಕೆ ಅನುಕೂಲ ಆಗುತ್ತೆ ಅಂತ ಹೇಳಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ನಾನೇ ಹೇಳ್ತಾ ಇದ್ದೀನಿ ಸಮಾವೇಶ ಮಾಡಬೇಡ ಎಂದು ದೇವೇಗೌಡ್ರು ಹೇಳಿದ್ರು, ಹಾಗಾದ್ರೆ ಸಮಾವೇಶಕ್ಕೆ ನೀವು ಬನ್ನಿ ಜೊತೆಯಾಗಿ ಮಾಡೋಣ ಅಂದೆ. ಅವರು ಅದಕ್ಕೂ ಒಪ್ಪಿಲ್ಲ. ಕೊನೆಗೆ ನನ್ನ ಮೇಲೆ ಕ್ರಮ ಜರುಗಿಸುತ್ತೇನೆ ಎಂದರು, ಸರಿ ನಾನು ಅದಕ್ಕೂ ಸಿದ್ಧನಿದ್ದೇನೆ ಎಂದು ಹೇಳಿ, ಸಮಾವೇಶ ಮಾಡಿದೆ. ಆಮೇಲೆ ನನ್ನನ್ನು ಪಕ್ಷದಿಂದ ಹೊರಹಾಕಿದ್ರು.
 
ರಾಜಣ್ಣ ಮತ್ತು ಜಯಚಂದ್ರ ಅವರು ತುಮಕೂರಿನಿಂದ ಸ್ಪರ್ಧೆ ಮಾಡಿ ಅಂತ ಅಭಿಮಾನದಿಂದ ಕರೆಯುತ್ತಾರೆ. ಆದರೆ ನಾನು ಬಾದಾಮಿಯಿಂದಲೇ ಸ್ಪರ್ಧೆ ಮಾಡೋದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ