ಬೆಂಗಳೂರು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಎಂದು ಹೇಳಿಕೊಂಡು ಊಟಿ ಮೂಲದ ವ್ಯಕ್ತಿಯೊಬ್ಬ ಜನರಿಂದ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು,
ವಂಚಕನ ವಿರುದ್ಧ ಬೆಂಗಳೂರಿನ ಸಂಜಯ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಊಟಿ ಮೂಲದ ಪ್ರಕಾಶ್ ಎಂಬಾತ ತಾನು ಶೋಭಾ ಕರಂದ್ಲಾಜೆ ಆಪ್ತ ಎಂದು ಹೇಳಿಕೊಂಡು ಚೆನ್ನೈ ಹಾಗೂ ಊಟಿಯಲ್ಲಿ ಜನರಿಂದ ಹಣ ಪಡೆದು ವಂಚಿಸಿದ್ದಾನೆ.
ಕೇಂದ್ರ ಸರ್ಕಾರದ ಟೆಂಡರ್ ಗಳನ್ನು ಕೊಡಿಸುವುದಾಗಿ ಹೇಳಿ ಹಣ ಪಡೆದು ಹಲವರಿಗೆ ಮೋಸ ಮಾಡಿದ್ದಾನೆ. ಚೆನ್ನೈ, ಊಟಿಯ ಲ್ಯಾಂಡ್ ಲಾರ್ಡ್ಸ್, ಕೃಷಿಕರು ಹಾಗೂ ಉದ್ಯಮಿಗಳಿಗೆ ಕಳೆದ ಮೂರು ತಿಂಗಳಿಂದ ಪ್ರಕಾಶ್ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.ವಂಚಕನ ಬಗ್ಗೆ ದೂರು ಬಂದ ಕಾರಣಕ್ಕೆ ಪರಿಶೀಲಿಸಿದಾಗ ಸಚಿವರ ಆಪ್ತ ಅಲ್ಲ ಎಂಬುದು ಗೊತ್ತಾಗಿದೆ.
ತಾನು ಸಚಿವೆಯವರ ಆಪ್ತ ಎಂದು ಕೆಲಸಗಳನ್ನು ಮಾಡಿಸಿಕೊಡುವುದಾಗಿ ಲಕ್ಷಾಂತರ ಹಣ ಪಡೆದು ವಂಚನೆ ಮಾಡಿದ್ದಾನೆ. ಇದೀಗ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಸಹಾಯಕ ವರುಣ್ ಆದಿತ್ಯ, ಪ್ರಕಾಶ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.