ನವದೆಹಲಿ : ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ಗೆ ಜಾಮೀನು ನೀಡಲು ಸಿಬಿಐ ವಿಶೇಷ ನ್ಯಾಯಾಲಯ ನಿರಾಕರಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಗೀತಾಂಜಲಿ ಗೋಯೆಲ್ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ.
ಮೇ 30 ರಂದು ಇಡಿಯಿಂದ ಬಂಧನಕ್ಕೊಳಗಾಗಿದ್ದ ಸತ್ಯೇಂದ್ರ ಜೈನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೀತಾಂಜಲಿ ಗೋಯೆಲ್ ಆದೇಶ ಕಾಯ್ದಿರಿಸಿದ್ದರು.
ಭ್ರಷ್ಟಾಚಾರ ತಡೆ ಕಾಯ್ದೆಯಡಿ 2017ರ ಆಗಸ್ಟ್ನಲ್ಲಿ ಸಿಬಿಐ ದಾಖಲಿಸಿದ್ದ ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಇಸಿಐಆರ್ ದಾಖಲಿಸಿಕೊಂಡು, ವಿಚಾರಣೆಗೆ ಸಮನ್ಸ್ ನೀಡಿತ್ತು. ಮೇ 30 ರಂದು ಜೈನ್ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ಜೂನ್ 13ರ ಬಳಿಕ ಅವರು ನ್ಯಾಯಂಗ ಬಂಧನದಲ್ಲಿದ್ದಾರೆ.
ವಿಚಾರಣೆ ವೇಳೆ ಸತ್ಯೇಂದ್ರ ಜೈನ್, ಕನಿಷ್ಠ ನಾಲ್ಕು ಕಂಪನಿಗಳ ಮೂಲಕ ಹಣ ಲಪಟಾಯಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಯಲ್ಲಿ ಸಚಿವರು ಭಾಗಿಯಾಗಿದ್ದಾರೆ.