ಬಳ್ಳಾರಿ: ಆಧುನಿಕ ತಂತ್ರಜ್ಞಾನದ ಸಹಾಯದಿಂದ ವೈವಿಧ್ಯಮ ವಿನ್ಯಾಸದ ಮದುವೆಯ ಕರೆಯೋಲೆ ಸಿದ್ಧಪಡಿಸಿದ್ದನ್ನು ನೋಡಿದ್ದೇವೆ. ಆದರೆ, ಎಲ್.ಇ.ಡಿ. ಪರದೆಯಿರುವ ಕರೆಯೋಲೆಯನ್ನು ಯಾರಾದರೂ ನೋಡಿದ್ದೀರಾ? ನೋಡಿಲ್ಲವಾದರೆ, ಕೇಳಿಲ್ಲವಾದರೆ ಈ ವರದಿ ಓದಿ.
ಗಣಿಧಣಿ ಎಂದೇ ಖ್ಯಾತರಾದ ಜನಾರ್ಧನ ರೆಡ್ಡಿ ಅವರ ಏಕೈಕ ಪುತ್ರಿ ಬ್ರಹ್ಮಿಣಿ ವಿವಾಹ ನವೆಂಬರ್ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಮದುವೆ ತಯಾರಿ ಈಗಾಗಲೇ ಭರದಿಂದ ಸಾಗಿದ್ದು, ಬಹುತೇಕ ಎಲ್ಲ ಪೂರ್ವ ತಯಾರಿಗಳು ಮುಕ್ತಾಯದ ಹಂತದಲ್ಲಿದೆ. ಈ ಮದುವೆಗೆ ಬಂಧು-ಬಳಗ-ಸ್ನೇಹಿತ ಹಾಗೂ ಆಪ್ತೇಷ್ಟರಿಗೆ ಕರೆಯಲೆಂದು ವಿಶಿಷ್ಟ ರೀತಿಯ ಆಹ್ವಾನ ಪತ್ರಿಕೆಯನ್ನು ರೆಡ್ಡಿ ಕುಟುಂಬ ಸಿದ್ಧಪಡಿಸಿದೆ.
ಮೊದಲ ನೋಟಕ್ಕೆ ತೀರಾ ರಿಚ್ ಆಗಿರುವ ಈ ಆಹ್ವಾನ ಪತ್ರಿಕೆಯನ್ನು ಓಪನ್ ಮಾಡಿದ ಕೂಡಲೇ ಹಸೆಮಣೆ ಏರಲಿರುವ ನವ ಜೋಡಿ ಪ್ರತ್ಯಕ್ಷವಾಗುತ್ತಾರೆ. ಅದು ಕೂಡಾ ಎಲ್.ಇ.ಡಿ. ಪರದೆ ಮೇಲೆ. ನಮ್ಮ ಮದುವೆಗೆ ಬಂದು ಹರಸಿ ಹಾರೈಸಿ ಎಂದು ಪ್ರಾರ್ಥಿಸುವ ಜೋಡಿ ಹಾಗೂ ಜನಾರ್ಧನ ರೆಡ್ಡಿ ದಂಪತಿ ಮಗಳ ಮದುವೆಗೆ ಹಾಡಿನ ಮೂಲಕ ಆಹ್ವಾನಿಸುವ ಶೈಲಿ ಪರದೆ ಮೇಲೆ ನವೀರಾಗಿ ಮೂಡಿಬಂದಿದೆ. ಅದರ ಕೆಳ ಭಾಗದಲ್ಲಿ ಮದುವೆಯ ದಿನಾಂಕ, ಸ್ಥಳಗಳಿರುವ ವಿವರವನ್ನು ಸಹ ಅಚ್ಚು ಹಾಕಲಾಗಿದೆ.
1 ನಿಮಿಷ 15ಸೆಕೆಂಡ್ ಇರುವ ಈ ವಿಡಿಯೋ ಆಮಂತ್ರಣ ಪತ್ರಿಕೆಯನ್ನು ನಟ, ನಿರ್ದೇಶಕ ಸಾಯಿ ಕುಮಾರ್ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆ. ತೆಲುಗು ಚಿತ್ರರಂಗದ ತಂತ್ರಜ್ಞರು ಈ ವೈಶಿಷ್ಟ್ಯ ಪೂರ್ಣ ಆಹ್ವಾನ ಪತ್ರಿಕೆ ರೂಪಿಸಿದ್ದಾರೆ. ಕರೆಯೋಲೆ ಒಳಗೆ ಬಾದಾಮಿ, ಗೋಡಂಬಿ ಸೇರಿದಂತೆ ಇನ್ನಿತರ ಡ್ರೈ ಫ್ರೂಟ್ಸ್ ಗಳು ತುಂಬಿವೆ. ಶೀಘ್ರವೇ ರಾಜ್ಯದ ಎಲ್ಲ ಹಿತೈಷಿಗಳಿಗೆ, ಮುಖಂಡರಿಗೆ ವಿಶೇಷ ಆಮಂತ್ರಣ ಪತ್ರಿಕೆಯನ್ನು ರೆಡ್ಡಿ ಕುಟುಂಬ ವಿತರಿಸಲಿದೆ. ಆದರೆ, ಈ ಆಹ್ವಾನ ಪತ್ರಿಕೆಗೆ ತಗುಲಿದ ವೆಚ್ಚ ಎಷ್ಟು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.