ದಸರೆಯ ಮೊದಲ ದಿನವೇ ಘಜ್ನಿ ಮಹಮದ್ ಸಂಸ್ಕೃತಿ ಮೆರೆದ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ

Sampriya

ಗುರುವಾರ, 3 ಅಕ್ಟೋಬರ್ 2024 (15:29 IST)
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹಿಂದೂ ದೇವಾಲಯಗಳನ್ನು ಧ್ವಂಸ ಗೊಳಿಸಿದ ಕುಖ್ಯಾತಿಯ ಘಜ್ನಿ ಮಹಮದ್ ನ ಸಂಸ್ಕೃತಿಯನ್ನು ನಾಡ ಹಬ್ಬ ದಸರೆಯ ಸಂದರ್ಭದಲ್ಲಿ ಮೆರೆದು ಕನ್ನಡ ನಾಡಿನ ಮಹನೀಯರನ್ನು ಅವಮಾನಿಸಿದೆ, ಇದು ನಾಡಹಬ್ಬಕ್ಕೆ ಬಳಿದ ಕಪ್ಪುಮಸಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.  

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಒಂದು ಭಾಗವಾಗಿರುವ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ನಾಡಿನ ಕಲೆ, ಸಂಸ್ಕೃತಿಯ ವೈಭವವನ್ನು ಸಾರುವ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಇದನ್ನು ಆಸ್ವಾದಿಸಲು ಬರುವ ಪ್ರೇಕ್ಷಕ ವೃಂದಕ್ಕೆ ಕನ್ನಡ ನಾಡು,ನುಡಿ, ಪರಂಪರೆಗೆ ಮಹಾನ್ ಕೊಡುಗೆ ಕೊಟ್ಟ ಮಹನೀಯರನ್ನು ಸ್ಮರಿಸುವ ನಾಮಫಲಕಗಳನ್ನು ಅಳವಡಿಸಲಾಗುತ್ತಿತ್ತು.

ಪುರಂದರದಾಸರು, ಕನಕದಾಸರು, ದ.ರಾ ಬೇಂದ್ರೆ, ಕುವೆಂಪು, ಡಾ.ರಾಜ್ ಕುಮಾರ್, ವಿ.ಕೃ ಗೋಕಾಕ್, ಟಿ.ಎನ್. ಬಾಲಕೃಷ್ಣ, ಸಂಗೀತ ದಿಗ್ಗಜರುಗಳಾದ ವಾಸುದೇವಾಚಾರ್ಯ, ಪಿಟೀಲು ಚೌಡಯ್ಯ ಇಂತಹ ಅನೇಕ ಮಹನೀಯರ ನಾಮಫಲಕಗಳನ್ನು ಅಳವಡಿಸಿ ವಸ್ತು ಪ್ರದರ್ಶನಕ್ಕೆ ಬರುವವರಿಗೆ ಅವರನ್ನು ಸ್ಮರಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು.

ಮಾಜಿ ಮೇಯರ್ ಅಯೂಬ್ ಖಾನ್ ಅವರನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ  ಕಾಂಗ್ರೆಸ್ ಸರ್ಕಾರ ಇತ್ತೀಚೆಗಷ್ಟೇ ನೇಮಿಸಿದ್ದು ಇದೀಗ ನಾಡಹಬ್ಬ ದಸರೆಯ ನವರಾತ್ರಿಯ ಆರಂಭದ ದಿನವೇ ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಮಹಾನ್ ಕೊಡುಗೆ ಕೊಟ್ಟ ಮಹಾನ್ ಸಾಧಕ ಮಹನೀಯರುಗಳ ಸ್ಮರಿಸುವ ಫಲಕಗಳನ್ನೆಲ್ಲ ಕಿತ್ತೆಸೆದು ಘಜ್ನಿ ಸಂಸ್ಕೃತಿಯನ್ನು ಮೆರೆಸಲಾಗಿದೆ.

ಈ ಕೂಡಲೇ ಇದ್ದ ಸ್ಥಳದಲ್ಲೇ ನಾಮಫಲಕಗಳನ್ನು ಅಳವಡಿಸಿ ರಾಜ್ಯ ಸರ್ಕಾರ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು. ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಗೂ ಅವರ ನೆರಳಿನಲ್ಲೇ ನಡೆದಿರುವ ದುಷ್ಕೃತ್ಯದ ಹೊಣೆ ಹೊರಬೇಕು ಹಾಗೂ ಜನರ ಕ್ಷಮೆಯಾಚಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ