ಬೆಳಗಾವಿ ಜಿಲ್ಲೆಯ ಝಂಜರವಾಡ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿರುವ ಬಾಲಕಿ ಕಾವೇರಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬಾಲಕಿಯ ಕೈ ಪತ್ತೆಯಾಗಿದ್ದು, ಹುಕ್ ಮೂಲಕ ಮೇಲೆತ್ತುವ ಕಾರ್ಯಾಚರಣೆ 2 ಬಾರಿ ವಿಫಲವಾಗಿದೆ. 3ನೇ ಬಾರಿಗೆ ಮೇಲೆತ್ತುವ ಪ್ರಯತ್ನ ಮುಂದುವರೆಸಿದೆ.
ಒಂದೊಮ್ಮೆ ಹುಕ್`ನಲ್ಲಿ ಸರಿಯಾಗಿ ಕೈ ಲಾಕ್ ಆಗದೇ ಇದ್ದಲ್ಲಿ ಮಗು ಮತ್ತಷ್ಟು ಕೆಳಗೆ ಕುಸಿದುಬಿಡಬಹುದು. ಹೀಗಾಗಿ, ಬಹಳ ಜಾಗರೂಕತೆಯಿಂದ 2ನೇ ಕಾರ್ಯಾಚರಣೆ ನಡೆಯುತ್ತಿದೆ. ಮಗುವಿನ ಮೇಲೆ ಬಿದ್ದಿರುವ ಮಣ್ಣನ್ನ ಸಕಿಂಗ್ ಮೆಶಿನ್ ಮೂಲಕ ಹೊರತೆಗೆಯಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ಪುಣೆಯಿಂದ ಬಂದಿರುವ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ ಕಾರ್ಯಾಚರಣೆ ನಡೆಸುತ್ತಿದೆ. ಡಿಸಿ, ಎಸ್ಪಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಕಾರ್ಯಾಚರಣೆಯ ಮಾನಿಟರಿಂಗ್ ನಡೆಸುತ್ತಿದ್ದಾರೆ.
ಇತ್ತ, ಮಗುವಿಗಾಗಿ ರೋಧಿಸುತ್ತಿರುವ ತಾಯಿ ಸವಿತಾ ಅಸ್ವಸ್ಥರಾಗಿದ್ದು, ಆಂಬ್ಯುಲೆನ್ಸ್`ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅನ್ನ ನೀರು ಏನೂ ಬೇಡ ನನ್ನ ಮಗುವನ್ನ ತೋರಿಸಿ ಎಂದು ಸವಿತಾ ರೋಧಿಸುತ್ತಿದ್ದಾರೆ.