ಬೆಂಗಳೂರು : ದೇಶದಲ್ಲಿ ಬಡವರ ತಲೆಯ ಮೇಲೆ ಸೂರಿಲ್ಲ ಎನ್ನುವುದು ದೇಶವ್ಯಾಪಿ ಸಮಸ್ಯೆಯಾಗಿದೆ.
ಇದನ್ನು ಹೋಲಾಡಿಸುವ ಪ್ರಯತ್ನ ರಾಜ್ಯದಲ್ಲಿ ಆಗುತ್ತಿದ್ದು, ಬಡವರಿಗಾಗಿ 5 ಸಾವಿರ ಎಕರೆ ಸರ್ಕಾರಿ ಜಮೀನು ಮೀಸಲಿಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರಿಂದು ರಾಜರಾಜೇಶ್ವರಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ 1,588 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ವಿಧಾನಸೌಧ ವ್ಯಾಪ್ತಿಯಲ್ಲಿನ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಬಳಿಕ ಮಾತನಾಡಿದರು.
ನಮ್ಮ ಸರ್ಕಾರ ಈಗ 5 ಲಕ್ಷ ಮನೆ ಪೂರ್ಣಗೊಳಿಸುತ್ತಿದೆ. ಕಟ್ಟಿರುವ ಮನೆಗಳನ್ನು ಪೂರ್ಣಗೊಳಿಸುವ ಸಂಕಲ್ಪವನ್ನು ನಮ್ಮ ಸರ್ಕಾರ ಮಾಡಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುತ್ತಿದ್ದ 1.75 ಲಕ್ಷ ಮೊತ್ತವನ್ನು 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಜಮೀನಿನ ಸಮಸ್ಯೆ ಬಗೆಹರಿಸಲು 5,000 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದ್ದು, ಬಡವರಿಗಾಗಿ ಇದನ್ನು ಮೀಸಲಿಟ್ಟು, ಅಲ್ಲಿ ನಿವೇಶನ ಮತ್ತು ಮನೆ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಘೋಷಿಸಿದ್ದಾರೆ.