ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಮತದಾರರ ಅಧಿಕಾರ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕ, ಅವಹೇಳನಕಾರಿ ಪದ ಪ್ರಯೋಗ ಮಾಡಲಾಗಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿಯ ವಿರುದ್ಧವೂ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಬಿಜೆಪಿ ಪಕ್ಷದ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಅದರಲ್ಲಿ ರಾಹುಲ್ ಗಾಂಧಿ ಹಾಗೂ ತೇಜಸ್ವಿ ಯಾದವ್ ಅವರ ಅರಿವಿನೊಂದಿಗೆ ಇದೆಲ್ಲ ನಡೆದಿದ್ದು, ಇಷ್ಟೊಂದು ಕೀಳುಮಟ್ಟದ ರಾಜಕೀಯ ಹಿಂದೆಂದೂ ಕಂಡಿರಲಿಲ್ಲ. ಈ ಯಾತ್ರೆಯಲ್ಲಿ ದ್ವೇಷ ರಾಜಕೀಯ ಎಲ್ಲ ಮಿತಿಗಳನ್ನು ಮೀರಿದೆ ಎಂದು ಹೇಳಿದೆ.
ಬಿಹಾರವನ್ನು ಅವಮಾನಿಸಿದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಅವರನ್ನು ಆಹ್ವಾನಿಸುವ ಮೂಲಕ ಬಿಹಾರದ ಜನತೆಗೆ ಅವಮಾನ ಎಸಗಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.