ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಸರ್ಕಾರದ ಆದೇಶ

ಶನಿವಾರ, 22 ಡಿಸೆಂಬರ್ 2018 (13:18 IST)
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ತೊಗರಿ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಬೆಲೆ 5675 ರೂ. ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 425 ರೂ. ಸೇರಿ ಒಟ್ಟು 6100 ರೂ. ದರದಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ರೈತರಿಂದ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಅದರಂತೆ ಡಿಸೆಂಬರ್ 24 ರಿಂದ ರೈತರ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲು ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಸಂಬಂಧ ವಿವಿಧ ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ತಾಲೂಕಿನ ತಹಶೀಲ್ದಾರರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ  2018-19ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯ ಸುಮಾರು 123 ಖರೀದಿ ಕೇಂದ್ರಗಳಲ್ಲಿ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ ಮಿತಿಗೊಳಪಟ್ಟು ತೊಗರಿ ಖರೀದಿಸಲಾಗುವುದು. ಖರೀದಿ ಕೇಂದ್ರದ ಸುತ್ತಳತೆಯ 15.ಕಿಮಿ ವ್ಯಾಪ್ತಿಯ ರೈತರು ಇಲ್ಲಿ ತೊಗರಿಯನ್ನು ತಂದು ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ.

ಇತ್ತೀಚೆಗೆ ಮಳೆ ಅಭಾವದಿಂದ ಬರಗಾಲ ಸ್ಥಿತಿ ಜಿಲ್ಲೆಯಲ್ಲಿ ತಲೆದೋರಿದರಿಂದ ಬೆಳೆ ವಿಮೆ ಪರಿಹಾರಕ್ಕಾಗಿ ಜಿಯೋ ಫೆನ್ಸಿಂಗ್ ಸರ್ವೆ ಮಾಡಲಾಗಿದೆ. ಸದರಿ ಸರ್ವೇ ಮೋಬೈಲ್ ಆ್ಯಪ್ ಮೂಲಕ ಮಾಡಿರುವುದರಿಂದ ಯಾವ ರೈತರು ಎಷ್ಟು ಎಕರೆಯಲ್ಲಿ ಯಾವ್ಯಾವ ಬೆಳೆ ಬೆಳೆದಿದ್ದಾರೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಲಭ್ಯವಿರುತ್ತದೆ. ತೊಗರಿ ಖರೀದಿ ಸಂದರ್ಭದಲ್ಲಿ ರೈತರ ನೀಡುವ ಮಾಹಿತಿಯೊಂದಿಗೆ ಈಗಾಗಲೆ ಕಲೆಹಾಕಿರುವ ಡೇಟಾವನ್ನು ಹೊಂದಿಸಿ ರೈತರಿಂದ ತೊಗರಿ ಖರೀದಿಸಬೇಕು ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ