ಡ್ರಗ್ಸ್ ಮಾಫಿಯಾ ನಿರ್ನಾಮಕ್ಕೆ ಸರಕಾರ ಬದ್ಧ: ಗೃಹ ಸಚಿವ

ಗುರುವಾರ, 16 ಮಾರ್ಚ್ 2017 (16:58 IST)
ನಗರದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಮಾಫಿಯಾ ಸದೆಬಡೆಯಲು ಸರಕಾರ ಸರ್ವಸನ್ನದ್ಧವಾಗಿದೆ. ಸರಕಾರ ಕಠಿಣ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.   
 
ವಿಧಾನಪರಿಷತ್‌ನಲ್ಲಿ ಬಿಜೆಪಿ ಮುಖಂಡ ವಿ.ಸೋಮಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಾದಕ ವಸ್ತುಗಳ ಮಾರಾಟದಲ್ಲಿ ಹೆಚ್ಚಳವಾಗುತ್ತಿದೆ. ಕಳೆದ ವರ್ಷ 31 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಡ್ರಗ್ಸ್ ಕಳ್ಳಸಾಗಾಣೆದಾರರು ಚಾಕೋಲೇಟ್, ಮಾತ್ರೆಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಕ್ಕಳು ಮಾದಕ ವಸ್ತುಗಳ ಜಾಲಕ್ಕೆ ಬೀಳುವುದನ್ನು ತಡೆಯಲು ಕಠಿಣ ಕ್ರಮದ ಅಗತ್ಯವಿದೆ ಎಂದರು. 
 
ಡ್ರಗ್ಸ್ ಮಾಫಿಯಾದಲ್ಲಿ ಹೆಚ್ಚಿನವರು ವಿದೇಶಿ ಪ್ರಜೆಗಳಾಗಿರುವುದರಿಂದ ಅವರ ವಿರುದ್ಧ ಕ್ರಮಕ್ಕೆ ಕೆಲ ತಿದ್ದುಪಡಿಗಳ ಅಗತ್ಯವಿದೆ. ಶೀಘ್ರದಲ್ಲಿ ಕೆಲ ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದ್ದಾರೆ.
 
ನಗರದ 48 ಪೊಲೀಸ್ ಠಾಣೆಗಳಲ್ಲಿ ಇದರ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡುವುದು ಕೇಂದ್ರ ವಿದೇಶಾಂಗ ಇಲಾಖೆ. ನಾವು ಅವರಿಗೆ ಪತ್ರ ಬರೆಯಬಹುದೇ ಹೊರತು ಹೆಚ್ಚಿನ ಅವಕಾಶವಿಲ್ಲ. ಆದರೂ ಸರ್ಕಾರ ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳುವುದಾಗಿ ಸಚಿವ ಪರಮೇಶ್ವರ್‌ ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ