ಕಾವೇರಿ ಹೋರಾಟಗಾರರ 22 ಪ್ರಕರಣಗಳು ವಾಪಸ್ ಪಡೆದ ಸರಕಾರ

ಬುಧವಾರ, 5 ಅಕ್ಟೋಬರ್ 2016 (19:14 IST)
ಕಾವೇರಿ ವಿವಾದ ಕುರಿತು 2012-13 ರ ಸಾಲಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮಂಡ್ಯ ಹೋರಾಟಗಾರರ ವಿರುದ್ಧ ದಾಖಲಾಗಿದ್ದ 22 ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾಹಿತಿ ನೀಡಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮಳೆ ಕೊರತೆಯಿಂದಾಗಿ ಇಲ್ಲಿಯವರೆಗೂ 68 ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿತ್ತು. ಆದರೆ, ಇಂದಿನ ಸಂಪುಟ ಸಭೆಯಲ್ಲಿ ಹೆಚ್ಚುವರಿಯಾಗಿ 45 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಒಟ್ಟು 110 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
 
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯಕ್ಕೆ ಬಳಸಿಕೊಂಡಿರುವ ಭೂಮಿಯನ್ನು ಈಗಾಗಲೇ ಡಿನೋಟಿಫಿಕೇಷನ್‌ಗೆ ನೀಡಲಾಗಿತ್ತು. ಇದೀಗ ಡಿನೋಟಿಫಿಕೇಷನ್‌ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು. 
 
ಕರ್ತವ್ಯ ನಿರತ ರಾಜ್ಯ ಪೊಲೀಸರಿಗಾಗಿ 15.30 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿ ವಸತಿ ಗೃಹ ನಿರ್ಮಾಣ ಮಾಡಲು ಸಂಪುಟ ಅಸ್ತು ಎಂದಿದೆ. 147 ಅಭ್ಯರ್ಥಿಗಳನ್ನು ಫುಡ್ ಸೆಫ್ಟಿ ಹುದ್ದೆಗೆ ಭರ್ತಿ ಮಾಡಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ