ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಡವಳಿಕೆಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ನೀಡುತ್ತಾನೆಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಧರ್ಮಸ್ಥಳ ವಿಚಾರವಾಗಿ ಜೆಪಿ ನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳ ಕೇಸ್‌ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆದುಕೊಂಡ ರೀತಿಗೆ ಮಂಜುನಾಥನೇ ಮುಂದಿನ ದಿನಗಳಲ್ಲಿ ಶಿಕ್ಷೆ ನೀಡುತ್ತಾನೆ. ಸರ್ಕಾರ ನಡವಳಿಕೆ ಸರಿಯಾಗಿಲ್ಲ. ಪ್ರಾರಂಭಿಕ ಹಂತದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ. ನಾನು ಧರ್ಮವನ್ನು ಬೆರೆಸಲು ಹೋಗಲ್ಲ. ಆದರೆ ಸರ್ಕಾರ ನಡೆದುಕೊಂಡ ರೀತಿ ಕ್ಷೇತ್ರಕ್ಕೆ ಅವಮಾನ, ಅನುಮಾನ ಆಗೋ ರೀತಿಯಲ್ಲಿ ಸರ್ಕಾರ ಎಸ್‌ಐಟಿ ತನಿಖೆ ನಾಟಕ ಆಡಿದೆ ಎಂದು ಕಿಡಿಕಾರಿದರು.
ಈ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ಸರ್ಕಾರಕ್ಕೆ ದೂರನ್ನು ನೀಡಿದ್ದು ದ್ವಾರಕನಾಥ್. ಸಿದ್ದರಾಮಯ್ಯಗೆ ಅವರೇ ದೂರು ಕೊಟ್ಟರು. ಆಗ ಸಿಎಂ ದೂರು ಬಂದ ತಕ್ಷಣ ಕ್ರಮ ತೆಗೆದುಕೊಳ್ಳುವ ವಾತಾವರಣ ನಿರ್ಮಾಣ ಮಾಡಿದರು. ಇದರಲ್ಲಿ ಎಡಪಂಥೀಯ ಶಕ್ತಿಗಳು ಇದೆ ಎಂದು ಹೇಳ್ತಾರೆ. ಯಾರಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.