ಶಾಲೆ ಯಾವಾಗ ಆರಂಭಿಸಬೇಕು? ಶಾಲೆಗಳಲ್ಲಿ ನಡೆಯುತ್ತಿದೆ ಪೋಷಕರ ಸಮೀಕ್ಷೆ
ಶನಿವಾರ, 20 ಜೂನ್ 2020 (07:41 IST)
ಬೆಂಗಳೂರು: ಕೊರೋನಾದಿಂದಾಗಿ ಶಾಲೆ ಯಾವಾಗ ಆರಂಭಿಸಬೇಕು ಎಂಬುದು ಇನ್ನೂ ಅನಿಶ್ಚಿತತೆಯಲ್ಲೇ ಇದೆ. ಈ ವಿಚಾರವಾಗಿ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತಳೆಯಲು ಸಾಧ‍್ಯವಿಲ್ಲ. ಹೀಗಾಗಿ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.
ಖಾಸಗಿ, ಸರ್ಕಾರಿ ಶಾಲೆಗಳಲ್ಲಿ ಈಗ ಪೋಷಕರ ಸಭೆ ಕರೆದು ಶಾಲೆ ಆರಂಭ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಫಾರಂ ಭರ್ತಿ ಮಾಡಿಸಿಕೊಳ್ಳಲಾಗುತ್ತಿದೆ. ಇದರಲ್ಲಿ ಶಾಲೆ ಆರಂಭವಾಗುವುದಕ್ಕೆ ಸಂಬಂಧಪಟ್ಟಂತೆ ಹಲವು ಪ್ರಶ್ನೆ ಕೇಳಲಾಗಿದ್ದು, ಇದರಲ್ಲಿ ಪೋಷಕರು ವ್ಯಕ್ತಪಡಿಸುವ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ಕಾರ ಶಾಲೆ ಯಾವಾಗ ಆರಂಭಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ಈಗಾಗಲೇ ಹಲವು ಶಾಲೆಗಳು ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ರವಾನೆ ಮಾಡಿದ್ದು, ಬಹುತೇಕ ಪೋಷಕರು ಸೆಪ್ಟೆಂಬರ್ ಬಳಿಕವೇ ಶಾಲೆ ಆರಂಭಿಸಿದರೆ ಸಾಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.