ಗೃಹಲಕ್ಷ್ಮಿ 4 ಸಾವಿರಕ್ಕೆ ಹೆಚ್ಚಿಸ್ತೀವಿ ಎಂದ ಕಾಂಗ್ರೆಸ್ ಶಾಸಕ: ಇರೋದನ್ನು ನೆಟ್ಟಗೆ ಕೊಡಿ ಎಂದು ಜನ

Krishnaveni K

ಗುರುವಾರ, 20 ಮಾರ್ಚ್ 2025 (09:46 IST)
ಬೆಂಗಳೂರು: ನಿನ್ನೆ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಮತ್ತೆ ನಾವು ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಹಣ 4 ಸಾವಿರ ರೂ.ಗೆ ಏರಿಕೆ ಮಾಡ್ತೀವಿ ಎಂದು ಘೋಷಣೆ ಮಾಡಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಾರ್ವನಿಕರು ಈಗ ಇರೋದನ್ನೇ ನೆಟ್ಟಗೆ ಕೊಡಿ ಎಂದು ಕಾಲೆಳೆದಿದ್ದಾರೆ.

ಕರ್ನಾಟಕ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಇದರಲ್ಲಿ ಪ್ರತೀ ಮನೆಯ ಓರ್ವ ಮಹಿಳೆಗೆ ತಿಂಗಳಿಗೆ 2,000 ರೂ. ನೀಡಲಾಗುತ್ತದೆ. ಆದರೆ ಗೃಹಲಕ್ಷ್ಮಿ ಹಣವನ್ನು ಸರಿಯಾಗಿ ತಿಂಗಳಿಗೊಮ್ಮೆ ಸರ್ಕಾರ ಖಾತೆಗೆ ಹಾಕುತ್ತಿಲ್ಲ ಎಂಬ ಆರೋಪವಿದೆ. ಕಳೆದ ಕೆಲವು ತಿಂಗಳು ವ್ಯತ್ಯಯವಾಗಿದ್ದೂ ಇದೆ.

ಈ ಬಗ್ಗೆ ಸದನದಲ್ಲೂ ಚರ್ಚೆಯಾಗಿದೆ. ಈ ನಡುವೆ ಕಾಂಗ್ರೆಸ್ ಶಾಸಕ ರಂಗನಾಥ್ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಹಣವನ್ನು 4 ಸಾವಿರ ರೂ.ಗೆ ಏರಿಕೆ ಮಾಡಲಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.

ಅವರ ಈ ಹೇಳಿಕೆಗೆ ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸಿದ್ದಾರೆ. ಈಗ ಕೊಡುವ ಹಣವನ್ನೇ ಸರಿಯಾಗಿ ನೀಡುತ್ತಿಲ್ಲ. ಇನ್ನು 4,000 ರೂ. ಬೇರೆ ಕೊಡ್ತೀರಾ? ಈಗ ಘೋಷಿಸಿರುವ ಹಣವನ್ನು ತಿಂಗಳಿಗೆ ಸರಿಯಾಗಿ ಖಾತೆಗೆ ಹಾಕಿ. ಆ ಬಳಿಕವೇ 4 ಸಾವಿರ ರೂ. ಮಾತು ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ