ಬಿಡದಿ ಬಳಿ ಕಾರಿನಲ್ಲಿ ತೆರಳುತ್ತಿದ್ದಾಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದೆ. ರಾಮನಗರದ ಮುತ್ತಪ್ಪ ರೈ ಮನೆ ಬಳಿಯೇ ಘಟನೆ ನಡೆದಿದೆ. ತೀರಾ ಸನಿಹದಿಂದಲೇ ಗುಂಡು ಹೊಡೆಯಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ರಿಕ್ಕಿ ರೈ ಮೂಗು, ಕೈಗೆ ಗುಂಡೇಟು ತಗುಲಿದೆ.
ಪ್ರತೀ ಬಾರಿಯೂ ರಿಕ್ಕಿ ರೈ ತಾವೇ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಹೀಗಾಗಿ ಇದನ್ನು ತಿಳಿದುಕೊಂಡೇ ದುಷ್ಕರ್ಮಿ ಕಾರು ಚಾಲಕನ ಸೀಟು ಗುರಿಯಾಗಿಸಿಕೊಂಡೇ ದಾಳಿ ಮಾಡಿದ್ದಾನೆ. ಆದರೆ ನಿನ್ನೆ ತಡರಾತ್ರಿಯಾಗಿದ್ದರಿಂದ ರಿಕ್ಕಿ ಡ್ರೈವರ್ ಜೊತೆಗೆ ತೆರಳಿದ್ದರು. ಗುಂಡಿನ ದಾಳಿಯಾಗುತ್ತಿದ್ದಂತೇ ಚಾಲಕ ಮುಂದಕ್ಕೆ ಬಾಗಿದ್ದರಿಂದ ಅವರಿಗೆ ಅಪಾಯವಾಗಲಿಲ್ಲ. ಪೊಲೀಸರು ಈಗ ಸ್ಥಳಕ್ಕೆ ಶ್ವಾನ ದಳವನ್ನು ಕರೆಸಿಕೊಂಡು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.