ಕೆಸಿ ವೇಣುಗೋಪಾಲ್ ಇದ್ದ ಏರ್ ಇಂಡಿಯಾ ವಿಮಾನ ದುರಂತದಿಂದ ಸ್ವಲ್ಪದರಲ್ಲೇ ಪಾರು
ತಿರುವನಂತಪುರಂನಿಂದ ದೆಹಲಿಗೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಮತ್ತು ಕೆಲವು ಸಂಸದರನ್ನು ಹೊತ್ತಿದ್ದ ವಿಮಾನ ಎಐ2455 ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ ವಿಮಾನವನ್ನು ಚೆನ್ನೈನಲ್ಲಿ ಭೂ ಸ್ಪರ್ಶ ಮಾಡಿಸಲು ಪ್ರಯತ್ನಿಸಲಾಯಿತು. ಮೊದಲ ಲ್ಯಾಂಡಿಂಗ್ ವೇಳೆ ರನ್ ವೇಯಲ್ಲಿ ಇನ್ನೊಂದು ವಿಮಾನವಿರುವುದು ಗೊತ್ತಾಯಿತು. ಹೀಗಾಗಿ ವಿಮಾನವನ್ನು ಪೈಲಟ್ ಚಾಣಕ್ಷ್ಯತನದಿಂದ ಮತ್ತೆ ಮೇಲಕ್ಕೆ ಹಾರಿಸಿದರು.
ಬಳಿಕ ಎರಡನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ. ಈ ಬಗ್ಗೆ ಕೆಸಿ ವೇಣುಗೋಪಾಲ್ ವಿವರವಾಗಿ ಟ್ವೀಟ್ ಮಾಡಿದ್ದಾರೆ. ಏರ್ ಇಂಡಿಯಾ ವಿಮಾನದ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆ ಎದ್ದಿದೆ. ತಾಂತ್ರಿಕ ದೋಷದ ಜೊತೆಗೆ ಹವಾಮಾನ ವೈಪರೀತ್ಯದಿಂದಾಗಿ ಸಮಸ್ಯೆಯಾಯಿತು. ದೊಡ್ಡದೊಂದು ದುರಂತದಿಂದ ಸ್ವಲ್ಪದರಲ್ಲದೇ ಪಾರಾದೆವು ಎಂದು ಅವರು ಬರೆದುಕೊಂಡಿದ್ದಾರೆ. ಈ ಬಗ್ಗೆ ತಕ್ಷಣ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಏರ್ ಇಂಡಿಯಾ ಕೂಡಾ ಸ್ಪಷ್ಟೀಕರಣ ನೀಡಿದ್ದು ತಾಂತ್ರಿಕ ದೋಷದಿಂದಾಗಿ ಈ ಸಮಸ್ಯೆಯಾಗಿದೆ ಎಂದಿದೆ.