ಅಕ್ಷಯ ಪಾತ್ರೆ ಯೋಜನೆಯ ಜೊತೆ ಕೈ ಜೋಡಿಸಿದ ಹೆಚ್ಎಎಲ್

ಬುಧವಾರ, 18 ಆಗಸ್ಟ್ 2021 (21:12 IST)
ಬೆಂಗಳೂರು: ಎಚ್‌ಎಎಲ್ ಪ್ರಾಯೋಜಿತ ಅಕ್ಷಯ ಪಾತ್ರೆಯ ಅಡುಗೆಮನೆಯನ್ನು ಬುಧವಾರ ಬೆಂಗಳೂರಿನ ಗುನ್ಯಾಗ್ರಹಾರ  ಗ್ರಾಮದಲ್ಲಿ ಸಿಎಂಡಿ ಆರ್ ಮಾಧವನ್ ಉದ್ಘಾಟಿಸಿದರು.
ನಾವು ಈ ಉದಾತ್ತ ಕೆಲಸಕ್ಕೆ ಕೈಜೋಡಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತೇವೆ. ಮಕ್ಕಳು
ಬೆಳೆದಂತೆ ಶಿಕ್ಷಣ ಮತ್ತು ಆಹಾರವು ಅವಿಭಾಜ್ಯ ಅಂಗವಾಗಿದೆ ಎಂದು ನಾವು ನಂಬುತ್ತೇವೆ. ಹೆಚ್ಎಎಲ್ ಇಂತಹ ಕೆಲಸಗಳಿಗೆ ಸದಾ ಜೊತೆಯಾಗಿ ನಿಲ್ಲುತ್ತದೆ ಎಂದರು.
ಮಕ್ಕಳು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಅಡುಗೆಮನೆಯು ಪ್ರತಿದಿನ ಸುಮಾರು 7500 ಮಕ್ಕಳಿಗೆ ಊಟ  ನೀಡಲಿದ್ದು, ಬೆಂಗಳೂರಿನಲ್ಲಿ ಇದು ನಾಲ್ಕನೆಯದ್ದಾಗಿದೆ. ಈ  ಅತ್ಯಾಧುನಿಕ ಅಡುಗೆಮನೆ ಮೂಲಸೌಕರ್ಯದೊಂದಿಗೆ ಉತ್ತಮ ಸುರಕ್ಷತೆ ಮತ್ತು ನೈರ್ಮಲ್ಯ ಮಾನದಂಡಗಳನ್ನು ಹೊಂದಿದೆ ಎಂದು ತಿಳಿಸಿದರು.
ಅಕ್ಷಯ ಪಾತ್ರ ಪ್ರತಿಷ್ಠಾನದ ಉಪಾಧ್ಯಕ್ಷ ಚಂಚಲಪತಿ ದಾಸ್  ಮಾತನಾಡಿ ಇಂತಹ ಪಾಲುದಾರಿಕೆಗಳು ಶಕ್ತಿಯುತವಾದ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಲು ನಿರ್ಣಾಯಕವಾಗಿದೆ ಮತ್ತು ಹೆಚ್.ಎ.ಎಲ್ ಸಂಸ್ಥೆಯ ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ರುಚಿಕರ, ನೈರ್ಮಲ್ಯಯುಕ್ತ ಮತ್ತು ಪೌಷ್ಟಿಕ ಆಹಾರದೊಂದಿಗೆ ಹೆಚ್ಚಿನ ಮಕ್ಕಳನ್ನು ತಲುಪುವ ಪ್ರತಿಷ್ಠಾನದ ಬದ್ಧತೆಯನ್ನು ಇಮ್ಮಡಿಗೊಳಿಸುತ್ತದೆ. ಪ್ರತಿಷ್ಠಾನವು ಕರ್ನಾಟಕದಲ್ಲಿ ಸುಮಾರು ನಾಲ್ಕು ಲಕ್ಷ ಮತ್ತು ದೇಶಾದ್ಯಂತ ಸುಮಾರು 17 ಲಕ್ಷ ಮಕ್ಕಳಿಗೆ ಆಹಾರವನ್ನು ನೀಡುತ್ತದೆ ಎಂದು ಹೇಳಿದರು.
2.5 ಕೋಟಿ ರೂ ವೆಚ್ಚದ ಅಡುಗೆ ಮನೆ: 
2.5 ಕೋಟಿ ರೂ ವೆಚ್ಚದ ಎಚ್‌ಎಎಲ್ ನ  ಸಿಎಸ್‌ಆರ್ ಯೋಜನೆಯಡಿಯ ಹೊಸ ಅಡುಗೆಮನೆಯು ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್ (ಇಟಿಪಿ), ನೀರಿನ ಸಂಸ್ಕರಣಾ ಘಟಕ, ಸೋಲಾರ್ ವಾಟರ್ ಹೀಟರ್, ಸಂಬಂಧಿಸಿದ ಅಡುಗೆ ಸಲಕರಣೆಗಳನ್ನು  ಒಳಗೊಂಡಿದೆ. ಹೊಸ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಬಡಿಸುವ ಸಮಯದಲ್ಲಿ ಆಹಾರದ ತಾಪಮಾನವನ್ನು 65 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚು ನಿರ್ವಹಿಸಬೇಕು ಮತ್ತು ಈ ಅಡುಗೆಮನೆಗೆ ಒದಗಿಸಲಾದ ಪಾತ್ರೆಗಳು ಅಗತ್ಯವನ್ನು ಪೂರೈಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ