ಹಾಸನಾಂಬ ದೇವಾಲಯದ ಬಾಗಿಲು ಅಕ್ಟೋಬರ್ 13ರಿಂದ ತೆರೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಅಧಿದೇವತೆಯ ದರ್ಶನವನ್ನು ಭಕ್ತರು ಪಡೆಯಬಹುದಾಗಿದೆ. ಒಟ್ಟು 15 ದಿನಗಳ ಕಾಲ ದೇವಾಲಯ ತೆರೆಯಲಿದೆ. ಆಶ್ವಿಜ ಮಾಸದ ಶುಕ್ಲ ಪಕ್ಷದ ಮೊದಲ ಗುರುವಾರದಂದು ಹಾಸನಾಂಬೆಯ ಬಾಗಿಲು ತೆರೆಯಲಿದ್ದು, ಬಲಿಪಾಡ್ಯಮಿಯ ಮಾರನೇಯ ದಿನ ಶಾಸ್ತ್ರೋಕ್ತವಾಗಿ ಗರ್ಭಗುಡಿಗೆ ಬಾಗಿಲು ಹಾಕಲಾಗುತ್ತದೆ. ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಧಿಕಾರಿಗಳು ಬಾಗಿಲು ತೆರೆಯುವ ಮತ್ತು ಮುಚ್ಚುವ ವೇಳೆ ಉಪಸ್ಥಿತರಿರುತ್ತಾರೆ. ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆ ಭಕ್ತರಿಗೆ ಹಲವು ನಿಬಂಧನೆಗಳನ್ನು ಹಾಕಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ.