ವರ್ಷಕ್ಕೆ ಒಂದು ಬಾರಿ ಭಕ್ತರಿಗೆ ದರ್ಶನ ಕೊಡುವ ಹಾಸನಾಂಬೆಯ ದೇವಸ್ಥಾನದ ಹುಂಡಿ ಎಳಿಕೆ ಕಾರ್ಯ ಪೂರ್ಣಗೊಂಡಿದೆ. ತಡರಾತ್ರಿವರೆಗೂ ಎಣಿಕೆ ಕಾರ್ಯ ಮಾಡಲಾಯಿತು. ಇತಿಹಾಸ ಪ್ರಸಿದ್ದ ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್ 13ರಂದು ಅಕ್ಟೋಬರ್ 27ರವರೆಗೂ ತೆರೆಯಲಾಯಿತು. ಈ ವೇಳೆ ಅತಿ ಹೆಚ್ಚು ಮೊತ್ತದ ದಾಖಲೆಯ ಆದಾಯ ಸಂಗ್ರಹವಾಗಿದೆ. ಈ ವರ್ಷ ಒಟ್ಟು ಹಾಸನಾಂಬೆ ಉತ್ಸವದಿಂದ 3 ಕೋಟಿ 69 ಲಕ್ಷ 51ಸಾವಿರದ 251 ರೂ. ಆದಾಯ ಸಂಗ್ರಹವಾಗಿದೆ. ಭಕ್ತರಿಂದ ಕಾಣಿಕೆ ರೂಪದಲ್ಲಿ 1 ಕೋಟಿ 88 ಲಕ್ಷ 40 ಸಾವಿರದ 935 ರೂ ಸಂಗ್ರಹವಾದರೆ, ವಿಶೇಷ ದರ್ಶನದ ಪಾಸ್ ಮಾರಾಟದಿಂದಲೂ 1 ಕೋಟಿ 48 ಲಕ್ಷ 27 ಸಾವಿರದ 600 ರೂ ಸಂಗ್ರಹವಾಗಿದೆ. ಜೊತೆಗೆ ಲಡ್ಡು ಪ್ರಸಾದ ಮಾರಾಟ ದಿಂದ 32 ಲಕ್ಷ 82 ಸಾವಿರದ 716 ರೂ ಆದಾಯ ಬಂದರೆ ಎಲ್ಲಾ ಮೂಲಗಳೂ ಸೇರಿ ಒಟ್ಟು 3 ಕೋಟಿ 69 ಲಕ್ಷ 51ಸಾವಿರದ 251 ರೂ ಸಂಗ್ರಹವಾಗಿದೆ.