ನೆರೆಯ ರಾಜ್ಯಕ್ಕೆ ನೀರು ಕೊಡಲು ಜಲಾಶಯ ಕಟ್ಟಿದ್ದೇವಾ?: ಕುಮಾರಸ್ವಾಮಿ ಆಕ್ರೋಶ

ಭಾನುವಾರ, 30 ಜುಲೈ 2017 (12:11 IST)
ನೆರೆಯ ರಾಜ್ಯಕ್ಕೆ ನೀರು ಕೊಡಲು ಜಲಾಶಯ ಕಟ್ಟಿದ್ದೀರಾ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಜಲಾಶಯಗಳು ತುಂಬದಿದ್ದರೂ ನೆರೆಯ ರಾಜ್ಯಕ್ಕೆ ನೀರು ಹರಿಬಿಡಲಾಗುತ್ತಿದೆ. ನಮ್ಮ ನಾಲೆಗಳು ನೀರಿಲ್ಲದೇ ಬರಿದಾಗಿವೆ. ಕಾವೇರಿ ಕಣಿವೆಯ ರೈತರ ಹಿತ ಬಲಿಗೊಟ್ಟು ತಮಿಳುನಾಡಿಗೆ ನೀರು ಬಿಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
 
ತಮಿಳುನಾಡಿಗೆ ನೀರು ಬಿಡುವಾಗ ಸ್ವಲ್ಪ ಪ್ರಮಾಣದ ನೀರನ್ನು ನಮ್ಮ ರೈತರ ನಾಲೆಗಳಿಗೆ ಬಿಡಿ. ನಮ್ಮ ರೈತರು ಬದುಕಿಕೊಳ್ಳುತ್ತಾರೆ ಎಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ.
 
ಹಾರಂಗಿ ನೀರು ನೆರೆಯ ರಾಜ್ಯಕ್ಕೆ ಹರಿದುಬಿಡುವುದು ತಡೆದು ಜಲಾಶಯಗಳಿಂದ ನಮ್ಮ ಕೆರೆಗಳಿಗೆ ನೀರು ಬಿಡಿ. ನಮ್ಮ ರೈತರು ಬೆಳೆಗಳನ್ನು ಬೆಳೆದುಕೊಳ್ಳಲಿ ಎಂದು ಮನವಿ ಮಾಡಿದರು.
 
ರಮಾನಾಥ್ ರೈ ಗೃಹಮಂತ್ರಿಯಾಗಲಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ರೈ ಗೃಹ ಮಂತ್ರಿಯಾದಲ್ಲಿ ಹೆಬ್ಬೆಟ್ಟು ಒತ್ತುವ ಗೃಹ ಮಂತ್ರಿಯಾಗಲಿದ್ದಾರೆ. ಹೆಸರಿಗೆ ಮಾತ್ರ ರೈ ಗೃಹ ಮಂತ್ರಿ. ನಿಜವಾಗಿಯೂ ಕೆಂಪಯ್ಯ ಗೃಹ ಮಂತ್ರಿಯಾಗಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 
 
ಆದಾಗ್ಯೂ ಸಿಎಂ ಸಿದ್ದರಾಮಯ್ಯರಿಗೆ ಕೆಂಪಯ್ಯ ಯಾಕೆ ಅನಿವಾರ್ಯ ಎನ್ನುವುದು ತಿಳಿಯುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ