ಬೆಳೆನಷ್ಟ ಬಗ್ಗೆ ಪಿಎಂ, ಸಿಎಂ ಕಡೆಯಿಂದ ಉತ್ತರವೇ ಬಂದಿಲ್ಲ: ದೇವೇಗೌಡ
ಶನಿವಾರ, 4 ನವೆಂಬರ್ 2017 (14:30 IST)
ಬೆಂಗಳೂರು: ದೇಶಕ್ಕೆ ಪ್ರಧಾನಿ ಇಂಪಾರ್ಟೆಂಟ್. ಬಿಜೆಪಿಯವರು ಕಣ್ಣು ಬಿಟ್ಟು ರೈತರತ್ತ ನೋಡಲಿ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ವಿಕಾಸ ವಾಹಿನಿ ಮೂಲಕ ಕುಮಾರಣ್ಣ ರೈತರ ಸಮಸ್ಯೆಯನ್ನು ಅಧ್ಯಯನ ಮಾಡಿ, ವರದಿ ನೀಡಬಹುದು. ಆದರೆ ಹೆಚ್ಚು ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕಾಗಿದ್ದು ಕೇಂದ್ರ. ನಮ್ಮ ಹತ್ರ ಇರೋ ಶಕ್ತಿ ಎಷ್ಟೋ ಅಷ್ಟು ನಾವು ಪ್ರಯತ್ನ ಮಾಡೇ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮೆಕ್ಕೆಜೋಳಕ್ಕೆ ಈ ಬಾರಿ ಆರ್ಮಿವೂಂಡ್ ರೋಗ ಬಂದಿದೆ. ಇದ್ರಿಂದ ರೈತರು ಕಂಗೆಟ್ಟಿದ್ದಾರೆ. 2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ರೋಗ ಹರಡಿದೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೋಗಬಾಧೆ ಹೆಚ್ಚಿದೆ. ಮೆಕ್ಕೆಜೋಳ ಬೆಳೆದ ರೈತರ ಸಮಸ್ಯೆಯನ್ನು ನಾನು ಅಧ್ಯಯನ ಮಾಡಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ತರಲು ಹಗಲುರಾತ್ರಿ ದುಡಿಯುತ್ತಿದ್ದೇನೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮೆಕ್ಕೆಜೋಳಕ್ಕೆ ಪರಿಹಾರ ನೀಡಿದ್ದರು.
ಈ ದೇಶ ರೈತರದ್ದೋ ಬರಿ ಕಾರ್ಪೋರೇಟರ್ ಗಳದ್ದೊ. ಹೀಗಾದ್ರೆ ರೈತರ ಸ್ಥಿತಿ ಏನಾಗಬೇಕು. ಬೆಳೆ ನಷ್ಟ ಕುರಿತು ಕೇಂದ್ರಕ್ಕೂ ಪತ್ರ ಬರೆದಿದ್ದೆ. ಆದ್ರೆ ಪ್ರತಿಕ್ರಿಯೆ ಸಿಕ್ಕಿಲ್ಲ. ಅವರಿಗೆ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಯಿದೆ .ಅದರಲ್ಲಿ ಬ್ಯುಸಿಯಾಗಿದ್ದಾರೆ. ಸಿಎಂ ಗೆ ಪರಿಸ್ಥಿತಿ ಬಗ್ಗೆ ಪತ್ರ ಬರೆದಿದ್ದೇನೆ. ಅವರಿಂದಲೂ ಉತ್ತರ ಬಂದಿಲ್ಲ. ಹೀಗಾದರೆ ರೈತರ ಪರಿಸ್ಥಿತಿಯೇನು ಎಂದು ಕೇಳಿದ್ದಾರೆ.
ಯಡಿಯೂರಪ್ಪ ಪರಿವರ್ತನಾ ರ್ಯಾಲಿ ಮಾಡುವಾಗ ರೈತರ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿಕೊಂಡು ಹೋಗಲಿ. ಕೇಂದ್ರಕ್ಕೆ ವಾಸ್ತವ ತಿಳಿಸಲಿ. ಇದು ಯಡಿಯೂರಪ್ಪನವರಲ್ಲಿ ನನ್ನ ಮನವಿ ಎಂದರು.