ರಾಮನಗರದಲ್ಲಿ ನಾನು ನಿಮಗೆ ಏನು ಅನ್ಯಾಯ ಮಾಡಿದ್ದೆ ಎಂದು ಕುಮಾರಸ್ವಾಮಿ ಕಣ್ಣೀರು

Krishnaveni K

ಶುಕ್ರವಾರ, 7 ಮಾರ್ಚ್ 2025 (10:00 IST)
Photo Credit: X
ರಾಮನಗರ: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದ್ದು ನಾನು ನಿಮಗೆ ಏನು ಅನ್ಯಾಯ ಮಾಡಿದ್ದೆ ಎಂದು ನನ್ನ ಮಗನನ್ನು ಸೋಲಿಸಿದಿರಿ ಎಂದು ಕಣ್ಣೀರು ಹಾಕಿದ್ದಾರೆ.
 

ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಸೋಲಿನ ಕಹಿ ಕುಮಾರಸ್ವಾಮಿ ಮನಸ್ಸಿನಿಂದ ಇನ್ನೂ ಮರೆಯಾಗಿಲ್ಲ. ಇದೀಗ ರಾಮನಗರದ ಅಕ್ಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

‘ಯಾವುದೇ ಒಂದು ಯೋಜನೆಯನ್ನು ಪೂರ್ಣಾವಧಿಗೆ ಅಧಿಕಾರ ಕೊಟ್ಟರೆ ಮಾಡಬಹುದು. ಯಾವುದೋ ದೇವರ ಅನುಗ್ರಹದಲ್ಲಿ 15 ತಿಂಗಳೋ, 20 ತಿಂಗಳಲ್ಲಿ ಯಾರದ್ದೋ ಮುಲಾಜಿನಲ್ಲಿ ಸರ್ಕಾರ ಮಾಡಿ ಅಂತಹ ಸಂದರ್ಭದಲ್ಲೂ ನಿಮಗೆ ಒಳ್ಳೆಯ ಕೆಲಸ ಮಾಡಿಕೊಡಲಿಲ್ವಾ ನಾನು? ಏನು ಅನ್ಯಾಯ ಮಾಡಿದೆ ಈ ರಾಜ್ಯದ ಜನತೆಗೆ? ದೇವೇಗೌಡರು ಏನು ಅನ್ಯಾಯ ಮಾಡಿದ್ದಾರೆ?

ಅದೆಂಥದೋ ಮೇಕೆ ದಾಟು, ಮೇಕೆ ದಾಟು ಅಂತೀರಿ, ಅದೀಗ ನಟ್ಟು, ಬೋಲ್ಟ್ ಸರಿ ಮಾಡ್ತಾರಂತೆ. ನೀವು ಮೇಕೆದಾಟು ಯೋಜನೆ ಮಾಡ್ತಾರೆ ಅಂತಾರಲ್ವಾ ನಿಮಗೆ ಅಧಿಕಾರ ಕೊಟ್ಟಿದ್ದರು. ಈಗ ಕುಮಾರಸ್ವಾಮಿ ಅನುಮತಿ ಕೊಡಿಸಿಲ್ಲ ಎಂದು ನನ್ನ ಮೇಲೆ ಹೇಳ್ತಾರೆ.

ನಾನು ಅನುಮತಿ ಕೊಡಿಸಲು ನೀವು ಪಾರ್ಟನರ್ ಆಗಿ ಇಟ್ಟುಕೊಂಡಿದ್ದೀರಲ್ಲಾ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ. ಮೊದಲು ತಮಿಳುನಾಡಿನಲ್ಲಿ ಅವರನ್ನು ಒಪ್ಪಿಸಿಕೊಂಡು ಬನ್ನಿ. ಅವರನ್ನು ಒಪ್ಪಿಸಿದರೆ 10 ನಿಮಿಷದಲ್ಲಿ ಪ್ರಧಾನಿ ಮೋದಿ ಬಳಿ ಅನುಮತಿ ಕೊಡಿಸೋಣ’ ಎಂದಿದ್ದಾರೆ.

‘ಒಂದು ನಾನು ಹೇಳ್ತೇನೆ, ನಾನು, ದೇವೇಗೌಡರು ಬರುವ ಮೊದಲು ಚನ್ನಪಟ್ಟಣ, ರಾಮನಗರ ಹೇಗಿತ್ತು, ನಾವು ಬಂದ ಮೇಲೆ ಹೇಗಿದೆ ಎಂದು ನೋಡಿ. 1999, 2000, 2001, 2002 ರಲ್ಲಿ ಪ್ರತೀ ದಿನ 30-40 ಮದುವೆ ಅಟೆಂಡ್ ಮಾಡಿದ್ದೇನೆ. ಪ್ರತೀ ದಿನ ರಾಮನಗರ, ಚನ್ನಪಟ್ಟಣ, ಮೈಸೂರು ಎಲ್ಲಾ ಸುತ್ತಿದ್ದೇನೆ. ಆಗ ರಾಮಗರ, ಚನ್ನಪಟ್ಟಣ ರಸ್ತೆ ಹೇಗಿತ್ತು? ಈಗ ಹೇಗಿದೆ ನೋಡಿ. ನಾವು ಏನೇನು ವ್ಯವಸ್ಥೆ ಮಾಡಿಲ್ಲ? ಈಗ ನಾನು ಏನು ಮಾಡಿದ್ದೆ ಎಂದು ಪ್ರಶ್ನೆ ಮಾಡ್ತಿದ್ದಾರೆ. ಅಂತಹವರ ಮಾತು ನೀವು ನಂಬ್ತೀರಾ, ಇದರಿಂದ ನನಗೇನೂ ನಷ್ಟವಿಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ