ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಬಂಧಿತರಾಗಿರುವ ರನ್ಯಾ ರಾವ್ ತಂದೆ ಡಿಜಿಪಿ ರಾಮಚಂದ್ರ ರಾವ್ ಮಗಳ ಬಗ್ಗೆ ಭಾವುಕವಾಗಿ ಹೇಳಿಕೆ ನೀಡಿದ್ದಾರೆ. ಮದುವೆಯಾದ ಬಳಿಕ ಆಕೆ ನಮ್ಮ ಭೇಟಿಗೆ ಅವಕಾಶ ನೀಡ್ತಿಲ್ಲ ಎಂದಿದ್ದಾರೆ.
ರನ್ಯಾ ಕೇವಲ ನಟಿ ಎಂಬ ಕಾರಣಕ್ಕೆ ಮಾತ್ರವಲ್ಲ, ಡಿಜಿಪಿ ಮಗಳು ಇಂತಹ ಕೆಲಸ ಮಾಡಿದ್ದಾಳೆ ಎಂಬ ಕಾರಣಕ್ಕೆ ಈ ಪ್ರಕರಣ ದೊಡ್ಡ ಸುದ್ದಿಯಾಗಿದೆ. ಡಿಜಿಪಿಯಾಗಿರುವ ತಂದೆಯ ಸಹಾಯವಿಲ್ಲದೇ ಇಷ್ಟು ಸುಲಭವಾಗಿ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಣಿಕೆ ಮಾಡಲು ಸಾಧ್ಯವಿರಲಿಲ್ಲ ಎಂದು ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇದರ ನಡುವೆ ಡಿಜಿಪಿ ರಾಮಚಂದ್ರ ರಾವ್ ಭಾವುಕ ಹೇಳಿಕೆ ನೀಡಿದ್ದಾರೆ. ಈ ಘಟನೆಯಿಂದ ನನ್ನ ಹೃದಯ ಚೂರಾಗಿದೆ. 2024 ರಲ್ಲಿ ಜತಿನ್ ಹುಕ್ಕೇರಿ ಜೊತೆ ರನ್ಯಾ ಮದುವೆಯಾಗಿತ್ತು. ಅದಾದ ಬಳಿಕ ಆಕೆ ನಮ್ಮಿಂದ ಅಂತರ ಕಾಯ್ದುಕೊಂಡಿದ್ದಾಳೆ. ನಮ್ಮ ಭೇಟಿಗೂ ಅವಕಾಶ ನೀಡಿಲ್ಲ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನಾನು ನನ್ನ ಕೆಲಸದಲ್ಲಿ ಪ್ರಾಮಾಣಿಕವಾಗಿದ್ದೇನೆ. ಈ ಘಟನೆ ನಮ್ಮ ಕುಟುಂಬಕ್ಕೆ ಕಳಂಕ ತಂದಿದೆ. ರನ್ಯಾ ಕಾನೂನು ಉಲ್ಲಂಘಿಸಿದ್ದರೆ ತಕ್ಕ ಶಿಕ್ಷೆಯಾಗಲಿ ಎಂದು ರಾಮಚಂದ್ರ ರಾವ್ ಹೇಳಿದ್ದಾರೆ.
ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ರಮ್ಯಾರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇದೀಗ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಿನ್ನೆ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ. ಇಂದು ಅದರ ತೀರ್ಪು ಬರಲಿದೆ.