ಕೋಮುಗಲಭೆಯಾದ ಸ್ಥಳಕ್ಕೆ ಇಂದು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದ ಎಚ್ ಡಿ ಕುಮಾರಸ್ವಾಮಿ, ಪೊಲೀಸರು ದಾಖಲಿಸಿ ಎಫ್ಐಆರ್ ಲಿಸ್ಟ್ ನೋಡಿ ಸಿಟ್ಟಾದರು. ಈ ಲಿಸ್ಟ್ ನಲ್ಲಿ ನಿಜವಾಗಿ ಗಲಾಟೆಗೆ ಕಾರಣರಾದವರ ಹೆಸರಿಲ್ಲ. ಘಟನೆಯಲ್ಲಿ ಪೊಲೀಸರ ತಪ್ಪೂ ಇದೆ. ಎಷ್ಟು ಪೊಲೀಸರ ಹೆಸರು ಹಾಕಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ಈ ಪ್ರಕರಣವನ್ನು ಇಷ್ಟಕ್ಕೇ ನಿಲ್ಲಿಸಲ್ಲ. ನಾನು ಯಾವತ್ತೂ ಒಂದು ಸಮುದಾಯವನ್ನು ಓಲೈಸಲಿಲ್ಲ. ಎಲ್ಲಾ ಸಮುದಾಯದವರನ್ನೂ ಸಮಾನವಾಗಿ ನೋಡುತ್ತಾ ಬಂದಿದ್ದೆ. ನಿಮ್ಮ ರಾಜಕೀಯ ಉದ್ದೇಶಕ್ಕಾಗಿ ಎರಡು ಸಮುದಾಯದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇನ್ನು, ಗೃಹಸಚಿವರು ಮಾಧ್ಯಮಗಳಿಗೆ ಇದೊಂದು ಆಕಸ್ಮಿಕ ಘಟನೆ ಎಂದಿದ್ದಾರೆ. ನಾನು ಪರಮೇಶ್ವರ್ ಗೆ ಈ ಮೂಲಕ ಕೇಳಲು ಬಯಸುತ್ತೇನೆ. ಈ ರೀತಿಯ ಹೇಳಿಕೆಗಳ ಮೂಲಕ ಜನತೆಗೆ ಸಂದೇಶ ಕೊಡಲು ಬಯಸುತ್ತೀರಿ? ಗೃಹಸಚಿವರಿಗೆ ಏನು ಇನ್ನು ಇಲ್ಲಿ ಹೆಣ ಬೀಳಬೇಕಿತ್ತಾ? ಇನ್ನೂ ಯಾಕೆ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.