Bengaluru Rains: ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಬಂದ ಗಾಳಿ, ಮಳೆಗೆ ಜನ ಕಕ್ಕಾಬಿಕ್ಕಿ

Krishnaveni K

ಗುರುವಾರ, 11 ಸೆಪ್ಟಂಬರ್ 2025 (09:18 IST)
ಬೆಂಗಳೂರು: ಹಗಲಿಡೀ ಬಿಸಿಲು, ಸೆಖೆ ರಾತ್ರಿ ಇದ್ದಕ್ಕಿದ್ದಂತೆ ಬಂದ ಗಾಳಿ, ಗುಡುಗು ಸಹಿತ ಮಳೆಗೆ ಬೆಂಗಳೂರು ಜನ ಕಕ್ಕಾಬಿಕ್ಕಿಯಾಗಿದ್ದಾರೆ. ರಾತ್ರಿ ಸುರಿದ ದಿಡೀರ್ ಮಳೆಗೆ ರಸ್ತೆಗಳು ಜಲಾವೃತವಾಗಿದೆ.

ಕೆಆರ್ ಪುರಂ, ಹೆಬ್ಬಾಳ, ಜಯನಗರ, ಶಾಂತಿನಗರ, ಮೆಜೆಸ್ಟಿಕ್ ಸೇರಿದಂತೆ ಅನೇಕ ಕಡೆ ನಿನ್ನೆ ರಾತ್ರಿ ಮಳೆಯಾಗಿದೆ. ನಿನ್ನೆ ಸಂಜೆ ವೇಳೆಗೆ ನಗರದಲ್ಲಿ ದಟ್ಟ ಮೋಡ ಕವಿದ ವಾತಾವರಣವಿತ್ತು. ರಾತ್ರಿ 9 ಗಂಟೆ ನಂತರ ಭಾರೀ ಗಾಳಿ, ಗುಡುಗು ಸಹಿತ ಮಳೆ ಆರಂಭವಾಗಿದೆ.

ಇದರಿಂದಾಗಿ ಹಲವು ಕಡೆಗೆ ರಸ್ತೆಗಳಲ್ಲಿ ನೀರು ತುಂಬಿದ್ದು, ಇಂದು ಬೆಳ್ಳಂ ಬೆಳಿಗ್ಗೆಯೇ ವಾಹನ ಸವಾರರು ಪರದಾಡುವಂತಾಗಿದೆ. ಅನೇಕ ಕಡೆ ಮಳೆ ನೀರು ನಿಂತು ಸಂಚಾರಕ್ಕೆ ತಡೆಯಾಗಿರುವುದಾಗಿ ಸಂಚಾರಿ ಪೊಲೀಸರು ಹೇಳಿದ್ದಾರೆ.

ರಾಮಮೂರ್ತಿ ನಗರ, ಕಸ್ತೂರಿ ನಗರ, ರಾಯಸಂದ್ರ ಜಂಕ್ಷನ್ ಬಳಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಸಂಚಾರಿ ಪೊಲೀಸರು ಪ್ರಕಟಣೆ ನೀಡಿದ್ದಾರೆ. ಇಂದೂ ಬೆಳಿಗ್ಗೆಯೇ ಮೋಡ ಕವಿದ ವಾತಾವರಣವಿದ್ದು ಅಪರಾಹ್ನದ ನಂತರ ಮಳೆಯಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ