ಬೆಂಗಳೂರು: ಐ ಲವ್ ಮೊಹಮ್ಮದ್ ಎನ್ನುವ ಪೋಸ್ಟರ್ ಒಂದು ಕರ್ನಾಟಕ, ಗುಜರಾತ್ ಗೂ ವ್ಯಾಪಿಸಿದ್ದು ಈಗ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದು ಹಿಂದೂಗಳ ವಿರುದ್ಧದ ಷಡ್ಯಂತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಐ ಲವ್ ಮೊಹಮ್ಮದ್ ಎನ್ನುವ ಪೋಸ್ಟರ್ ಹಿಡಿದು ಕೆಲವರು ಹೆಜ್ಜೆ ಹಾಕಿದ್ದರು. ಇದಾದ ಬಳಿಕ ಈ ಪೋಸ್ಟರ್ ಈಗ ಎಲ್ಲೆಡೆ ವ್ಯಾಪಿಸುತ್ತಿದ್ದು, ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಐ ಲವ್ ಮೊಹಮ್ಮದ್ ಪೋಸ್ಟರ್ ಗೆ ಪ್ರತಿಯಾಗಿ ಹಿಂದೂಗಳು ಐ ಲವ್ ಮಹದೇವ್ ಪೋಸ್ಟರ್ ಹಾಕುತ್ತಿದ್ದಾರೆ. ಇದೀಗ ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಬಿವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ
ಹಿಂದೂ ಸಮುದಾಯದ ಮೇಲಿನ ಕೋಮುವಾದಿ ದುಷ್ಟರ ದಾಳಿ ಸರಣೀ ರೂಪದಲ್ಲಿ ಮುಂದುವರೆಯುತ್ತಲೇ ಇದೆ. ನಿನ್ನೆ ದಾವಣಗೆರೆಯಲ್ಲಿ ಕೋಮು ಉದ್ವಿಗ್ನತೆ ಪ್ರಚೋದಿಸುವ ಬ್ಯಾನರ್ ಅಳವಡಿಸಿ ಹಿಂದೂ ಸಮುದಾಯದ ಮನೆಗಳನ್ನು ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿ ಆತಂಕಮಯ ವಾತಾವರಣ ಸೃಷ್ಟಿಸಿ ಹಿಂದುಗಳ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಅತ್ಯಂತ ಖಂಡನೀಯ.
ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿ ಭಯಗ್ರಸ್ತ ವಾತಾವರಣ ಉಂಟುಮಾಡಿದ ಮುಸ್ಲಿಂ ಕೋಮುವಾದಿ ದುಷ್ಕರ್ಮಿಗಳನ್ನು ಪೊಲೀಸರು ಈ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಿ. ದೇಶದ ಹಲವೆಡೆಗಳಲ್ಲಿ "ಐ ಲವ್ ಮೊಹಮ್ಮದ್" ಎಂಬ ಬ್ಯಾನರ್ ಅಳವಡಿಸಿ ಹಿಂದೂಗಳನ್ನು ಪ್ರಚೋದಿಸಲೆಂದೇ ವಿವಾದ ಹುಟ್ಟುಹಾಕಲಾಗಿದ್ದು, ಇದು ದಾವಣಗೆರೆ ಮೂಲಕ ರಾಜ್ಯವನ್ನೂ ಪ್ರವೇಶಿಸಿದೆ.
ಪೋಲಿಸ್ ಇಲಾಖೆ ಅತ್ಯಂತ ಗಂಭೀರವಾಗಿ ಈ ಘಟನೆಯನ್ನು ಪರಿಗಣಿಸಿ ಕೋಮುವಾದಿ ದುಷ್ಟರ ಅಟ್ಟಹಾಸ ರಾಜ್ಯದ ಇತರೆಡೆಗಳಲ್ಲೂ ಪಸರಿಸದಂತೆ ಈ ಕೂಡಲೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ. ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿರುವ ದುಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸದೇ ಹೋದರೆ ಪರಿಸ್ಥಿತಿ ಗಂಭೀರ ತಿರುವು ಪಡೆಯಲು ಪೊಲೀಸರೇ ಕಾರಣರಾಗುತ್ತಾರೆ ಎಂದು ಎಚ್ಚರಿಸಬಯಸುತ್ತೇನೆ ಎಂದಿದ್ದಾರೆ.