ಮೈಸೂರಿನಲ್ಲಿ ವರುಣನ ಆರ್ಭಟ: ಕೆರೆ ಕಟ್ಟೆಗಳು ಒಡೆದು ಮನೆಗಳಿಗೆ ನುಗ್ಗಿದ ನೀರು

ಬುಧವಾರ, 27 ಸೆಪ್ಟಂಬರ್ 2017 (16:39 IST)
ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಬೆನ್ನಲ್ಲೇ ನಗರದಲ್ಲಿ ಕಳೆದೆರಡು ದಿನಳಿಂಗ ಭಾರೀ ಮಳೆಯಾಗುತ್ತಿದೆ. ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಭಾರೀ ಅವಾಂತರ ಸೃಷ್ಟಿಯಾಗಿದೆ.

ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ಎಡಬಿಡದೆ ಸುರಿಯುತ್ತಿರೋ  ಭಾರೀ ಮಳೆಯಿಂದ ಅಲೀಂ ನಗರದಲ್ಲಿ ಕಾಂಪೌಂಡ್ ಕುಸಿದು ಬಿದ್ದು ನಾಲ್ವರಿಗೆ ಗಾಯಗಳಾಗಿವೆ. ಸ್ಲಂ ಬೋರ್ಡ್ ಒಂದನೇ ಬ್ಲಾಕ್ ನಲ್ಲಿ ಮನೆಗಳು ಬಿರುಕು ಬಿಟ್ಟಿವೆ. ಇಲ್ಲಿನ ನಿವಾಸಿಗಳು ಕಟ್ಟಡ ಕುಸಿಯುವ ಆತಂಕದಲ್ಲಿದ್ದಾರೆ. ಇದೇ ರೀತಿ ಗುಂಡೂರಾವ್ ನಗರ, ಪಡುವಾರಹಳ್ಳಿ, ಗೌಸಿಯಾನಗರ ಸೇರಿ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ.

ಹೂಟಗಳ್ಳಿಯ ಸೈಲೆಂಟ್ ಶೋರ್ ರೆಸಾರ್ಟ್ ಪಕ್ಕದ ಕೆರೆ ಒಡೆದು ಭಾರೀ ಹಾನಿ ಸಂಭವಿಸಿದೆ. ಮಳೆರಾಯನ ಆರ್ಭಟಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಗೋಣಿಕೆರೆ ಒಡೆದು ಮನೆಗೆ ನೀರು ನುಗ್ಗಿದೆ. ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕನಕಗಿರಿ, ಗುಂಡೂರಾವ್ ನಗರ ಕೆರೆಯಂತಾಗಿದೆ.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೆಟ್ಟಿಲಿನಲ್ಲಿ ಜಲಪಾತದ ರೀತಿಯಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿರುವುದು ಕಂಡು ಬಂತು. ಮಳೆಯ ರುದ್ರ ನರ್ತನಕ್ಕೆ ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆ.ಸಿ.ನಗರ ಬಹುತೇಕ ಜಲಾವೃತಗೊಂಡಿದ್ದು, ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಚಾಮುಂಡಿ ಬೆಟ್ಟದ ಮೇಲ್ಭಾಗದಿಂದ ಹರಿದುಬಂದ ಭಾರೀ ಪ್ರಮಾಣದ ನೀರು ಬೆಟ್ಟದ ತಪ್ಪಲಿನಲ್ಲಿರುವ ತಾವರೆಕೆರೆ ತಲುಪಿ ಭರ್ತಿಯಾದ ಪರಿಣಾಮ ಕೆರೆ ಕೋಡಿ ಒಡೆದಿದೆ. ಇದರಿಂದ ಜನ ಕಂಗಾಲಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ