ಕೇರಳದಲ್ಲಿ ಮಳೆ ಮುಂದುವರಿದಿದೆ. ತಿರುವನಂತಪುರ, ಕೊಲ್ಲಂ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು, ಮಳೆಯ ಸಂಭವದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹಲವೆಡೆ ಸೊತ್ತುಗಳಿಗೆ ಹಾನಿ ಉಂಟಾಗಿದೆ.
ಭಾರತ ಹವಾಮಾನ ಇಲಾಖೆ ಕೇರಳದ ಎರ್ನಾಕುಳಂ, ಇಡುಕ್ಕಿ, ತ್ರಿಶೂರು, ಕೋಝಿಕ್ಕೋಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಸೋಮವಾರ ಆರೆಂಜ್ ಅಲರ್ಟ್ ಘೋಷಿಸಿತ್ತು. ಕೊಲ್ಲಂ, ಕೊಟ್ಟಾಯಂ, ತಿರುವನಂತಪುರ, ಇಡುಕ್ಕಿ ಹಾಗೂ ತ್ರಿಶೂರು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯಿಂದ ತೀವ್ರ ಹಾನಿ ಉಂಟಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ರಾಜ್ಯಾದ್ಯಂತ ಮಳೆ ಸಂಬಂಧಿಸಿದ ಹಲವು ದುರಂತಗಳು ಸಂಭವಿಸಿವೆ. ಒಂದು ಮನೆ ಸಂಪೂರ್ಣವಾಗಿ ನಾಶವಾಗಿದೆ.
28 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಕಳೆದ 24 ಗಂಟೆಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಕಣ್ಣೂರು ಹಾಗೂ ತ್ರಿಶೂರು ಜಿಲ್ಲೆಗಳಲ್ಲಿ ರವಿವಾರ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಎರ್ನಾಕುಳಂ ಜಿಲ್ಲೆಯಲ್ಲಿ ಗುಡ್ಡೆ ಕುಸಿತ ಸಂಭವಿಸಿ ಓರ್ವ ಚಾಲಕ ಮೃತಪಟ್ಟಿದ್ದಾರೆ.