ಅಕ್ಟೋಬರ್ 1ರಿಂದ 15ರವರೆಗೆ ಭಾರೀ ಮಳೆ ದಾಖಲು

ಭಾನುವಾರ, 17 ಅಕ್ಟೋಬರ್ 2021 (22:16 IST)
ಬೆಂಗಳೂರು: ಮುಂಗಾರು ಅಂತ್ಯದಲ್ಲಿ ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ಬರಪೀಡಿತ ತಾಲೂಕು ಸಂಖ್ಯೆ ಕಡಿಮೆಯಾಗಿ ನೆರೆ ಪೀಡಿತ ತಾಲೂಕು ಗಳು ಹೆಚ್ಚಾಗಿವೆ.
ಸಹಜವಾರಿ ಸೆಪ್ಟೆಂಬರ್ ಅಂತ್ಯಕ್ಕೆ ಮುಂಗಾರು ಮುಗಿದು ಹಿಂಗಾರು ಮಳೆ ಆರಂಭವಾಗಬೇಕಿತ್ತು. ಆದರೆ, ವಾತಾವರಣ ಬದಲಾವಣೆಯಿಂದ ಮುಂಗಾರು ಮುಂದುವರಿದಿದೆ. ಇನ್ನೆರಡು ದಿನಗಳಲ್ಲಿ ಹಿಂಗಾರು ಆರಂಭವಾಗಿದೆ.
ಅಕ್ಟೋಬರ್ 1 ರಿಂದ ಈವರೆಗೆ ಭರ್ಜರಿ ಮಳೆಯಾಗಿದ್ದು, ಕೆರೆಕಟ್ಟೆಗಳು ಭರ್ತಿಯಾಗಿವೆ. ಸುಮಾರು 150 ಕ್ಕೂ ಅಧಿಕ ತಾಲೂಕು ಗಳನ್ನು ನೆರೆಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿದೆ. ಕಳೆದ ವರ್ಷ 100 ತಾಲೂಕು ಗಡಿ ದಾಟಿರಲಿಲ್ಲ.
ಜೂನ್ 1ರಿಂದ ಸೆ.1 ರವರೆಗೆ ದಕ್ಷಿಣ ಒಳನಾಡು 386 ಮಿ.ಮಿ., ಉತ್ತರ ಒಳನಾಡು 496 ಮಿ.ಮೀ., ಮಲೆನಾಡು 1283 ಮಿ.ಮೀ., ಕರಾವಳಿಯಲ್ಲಿ 2692 ಮಿ.ಮೀ. ಮಳೆಯಾಗಿದೆ. 
ಜಲಾಶಯಗಳು ಭರ್ತಿ: ರಾಜ್ಯದಲ್ಲಿ 13 ಜಲಾಶಯಗಳಿದ್ದು, ಶೇ. 91 ರಷ್ಟು ಭರ್ತಿಯಾಗಿವೆ. ಕೆಎಸ್ ಆರ್ 38 ಟಿ.ಎಂ.ಸಿ., ಲಿಂಗನಮಕ್ಕಿ 141 ಟಿಎಂಸಿ, ಸೂಪ 117 ಟಿಎಂಸಿ, ತುಂಗಭದ್ರಾ 100 ಟಿಎಂಸಿ, ಆಲಮಟ್ಟಿ 123 ಟಿಎಂಸಿ, ಘಟಪ್ರಭಾ 51 ಟಿಎಂಸಿ ಸೇರಿ ಉಳಿದ ಜಲಾಶಯಗಳು ಭಾಗಶಃ ಭರ್ತಿಯಾಗಿವೆ.
ರಸ್ತೆ ಸಂಚಾರ ಅಸ್ತವ್ಯಸ್ಥ:
ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸುರಿದ ಮಳೆಗೆ ಹಳ್ಳಕೊಳ್ಳ ತುಂಬಿ ಹರಿದ ಹಿನ್ನೆಲೆ ಪ್ರವಾಸಿಗರು ಕಾಡಿನ ಮಧ್ಯ ನೀರು ಹರಿವು ಕಡಿಮೆಯಾಗುವ ತನಕ ಕಾಯಬೇಕಾಯಿತು. ಇದರೊಟ್ಟಿಗೆ, ಲಾಂಗ್ ರೈಡಿಗೆಂದು ಬಿಳಿಗಿರಿರಂಗನ ಬೆಟ್ಟ, ಬಂಡೀಪುರ, ಭರಚುಕ್ಕಿಗೆ ಬಂದಿದ್ದವರು ಮಳೆಯಿಂದ ತೊಂದರೆಗೊಳಗಾದ ಘಟನೆ ಶನಿವಾರ ಮತ್ತು ಭಾನುವಾರ  ನಡೆಯಿತು.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು:
ಮಂಡ್ಯ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ನಗರದ ರಸ್ತೆಗಳು ಜಲಾವೃತಗೊಂಡಿವೆ. ಮಳೆ ನೀರಿನ ನಡುವೆ ವಾಹನಗಳ ಸವಾರರು ಪರದಾಡಿದರು. ಹಾಲಹಳ್ಳಿ ಬಡಾವಣೆ, ಬೀಡಿ ಕಾರ್ಮಿಕರ ಕಾಲೋನಿ, ಶಂಕರನಗರ ಸೇರಿದಂತೆ ನಗರದ ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು.
ಅ.1ರಿಂದ 7ರವರೆಗಿನ ಮಳೆ ಪ್ರಮಾಣ:
ವಲಯ- ವಾಡಿಕೆ- 2020- 2021
ದ.ಒಳನಾಡು- 41 - 16  - 70
ಉ. ಒಳನಾಡು - 41- 18- 39
ಕರಾವಳಿ - 66 -23-102
ಮಲೆನಾಡು - 47 - 10- 106
ಸೆಪ್ಟೆಂಬರ್ ಅಂತ್ಯಕ್ಕೆ ಮುಗಿಯಬೇಕಿದ್ದ ಮುಂಗಾರು ಮಳೆ, ಇನ್ನೂ ಸುರಿಯುತ್ತಿದೆ. ನಿರೀಕ್ಷೆ ಹಾಗೂ ವಾಡಿಕೆಗಿಂತ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗಿದೆ. 150 ಕ್ಕೂ ಅಧಿಕ ನೆರೆಪೀಡಿತ ತಾಲೂಕುಗಳಿದ್ದು, ದಶಕಗಳಿಂದ ತುಂಬದ ಕೆರೆಗಳು ತುಂಬಿವೆ. ಇನ್ನೆರಡು ದಿನಗಳಲ್ಲಿ ಹಿಂಗಾರು ಮಳೆ ಆರಂಭವಾಗಲಿದೆ.
- ಶ್ರೀನಿವಾಸರೆಡ್ಡಿ, ಹವಾಮಾನ ತಜ್ಞ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ