ಕೋಲಾರ: ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಹೇಳಿ, ಸದ್ದು ಮಾಡಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಇಂದು ಕೋಲಾರ ನಗರಕ್ಕೆ ಭೇಟಿ ನೀಡಿದ್ದ ವೇಳೆ ಭಾರಿ ಭದ್ರತೆಯನ್ನು ಕಲ್ಪಿಸಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಸಿಪಿಐಗಳು ಹಾಗೂ ನೂರಾರು ಕಾನ್'ಸ್ಪೆಬಲ್'ಗಳನ್ನು ಸಚಿವರ ಭದ್ರತೆಗೆ ನಿಯೋಜಿಸಲಾಗಿದೆ.
ಸುದ್ದಿಗಾರರಿಗೆ ಹನಿಟ್ರ್ಯಾಪ್ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, 'ಎಲ್ಲವನ್ನೂ ವಿಧಾನಸಭೆ ಅಧಿವೇಶನದಲ್ಲಿ ವಿವರವಾಗಿ ಹೇಳಿದ್ದೇನೆ. ಅದನ್ನು ಬಿಟ್ಟು ಹೇಳುವಂಥದ್ದು ಏನೂ ಇಲ್ಲ. ಇಂಥ ಪ್ರಕರಣ ಮೊದಲೂ ಅಲ್ಲ; ಕೊನೆಯೂ ಅಲ್ಲ. ಮುಂದೆಯೂ ನಡೆಯುತ್ತಿರುತ್ತವೆ' ಎಂದರು.
ಬಿಜೆಪಿ ಶಾಸಕರು ಸ್ಪೀಕರ್ ಪೀಠಕ್ಕೆ ತೋರಿದ ಅಗೌರವದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಈ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಪ್ಪು ಚುಕ್ಕೆ. ಜನಪರವಾದ ವಿಚಾರದಲ್ಲಿ ಗಲಾಟೆ ನಡೆದಿದ್ದರೆ ಒಪ್ಪುವಂಥದ್ದು. ಬಜೆಟ್ ಮೇಲಿನ ಉತ್ತರಕ್ಕೆ ಅಡ್ಡಿಪಡಿಸಿದ್ದಾರೆ. ಇದೊಂದು ಪೂರ್ವಯೋಜಿತ ಪಿತೂರಿ. ನಾನೇನಾದರೂ ಸ್ಪೀಕರ್ ಆಗಿದ್ದರೆ ಮೊದಲೇ ಅಮಾನತುಗೊಳಿಸುತ್ತಿದ್ದೆ' ಎಂದು ಹೇಳಿದರು.
ರಾಜ್ಯ ಬಂದ್ ಬಗೆಗಿನ ಪ್ರಶ್ನೆಗೆ, ಬೆಂಗಳೂರಿನಲ್ಲಿ ಬಂದ್ ಮಾಡಿದರೆ ಬೆಳಗಾವಿಯಲ್ಲಿರುವ ಕನ್ನಡಿಗರಿಗೆ ರಕ್ಷಣೆ ಸಿಗುತ್ತದೆಯೇ ಎಂದು ಕೇಳಿದರು.