ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೆಡಿಎಸ್ ಜತೆ ಮೈತ್ರಿಗೆ ಹೈಕಮಾಂಡ್ ರೆಡಿಯಾಗಿದ್ದರೆ ರಾಜ್ಯ ಬಿಜೆಪಿ ಇನ್ನೂ ರೆಡಿಯಾಗಿಲ್ವಾ ಎಂಬ ಪ್ರಶ್ನೆ ಎದ್ದಿದೆ.
ರಾಜ್ಯ ನಾಯಕರಲ್ಲಿ ಕೆಲವರಿಗೆ ಮೈತ್ರಿ ಅಗತ್ಯ ಇಲ್ಲ ಎಂಬ ಭಾವನೆ ಇದೆ. ಮೈತ್ರಿಗೆ ಖುದ್ದು ಹೈಕಮಾಂಡ್ ಆಸಕ್ತಿ ತೋರುತ್ತಿರುವುದರಿಂದ ಅಸಮಾಧಾನಿತರು ಮೌನವಾಗಿದ್ದಾರೆ ಎನ್ನಲಾಗುತ್ತಿದೆ.
ಜೆಡಿಎಸ್ ಜತೆಗಿನ ಸ್ನೇಹಕ್ಕೆ ಕೆಲವರು ನಿರಾಸಕ್ತಿ ತೋರುತ್ತಿರುವ ವಿಚಾರ ಬಿಎಸ್ ಯಡಿಯೂರಪ್ಪ ವರಿಷ್ಠರ ಗಮನಕ್ಕೆ ತಂದಿರುವ ಸಾಧ್ಯತೆಯಿದೆ. ಹೀಗಾಗಿ ಲೋಕಸಮರಕ್ಕೆ ಮೈತ್ರಿ ವಿಚಾರದಲ್ಲಿ ಹೈಕಮಾಂಡ್ ಲೆಕ್ಕಾಚಾರ ಏನು? ಕೆಲ ರಾಜ್ಯ ನಾಯಕರ ಅಭಿಪ್ರಾಯಕ್ಕೆ ವರಿಷ್ಠರ ಸಂದೇಶ ಏನು ಎನ್ನುವುದೇ ಸದ್ಯದ ಕುತೂಹಲ.
ಮತ್ತೊಂದೆಡೆ ಜೆಡಿಎಸ್ ಜೊತೆ ಸ್ನೇಹ ಬೆಳೆಸಿಕೊಂಡು ತನ್ನದೇ ಲೆಕ್ಕಚಾರ ಹಾಕಿ ಈ ಬಾರಿ ಮೈತ್ರಿ ದಾಳ ಉರುಳಿಸಲು ಹೈಕಮಾಂಡ್ ಪ್ಲ್ಯಾನ್ ಮಾಡಿಕೊಂಡಿದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ಗೆ ಟಕ್ಕರ್ ಕೊಡಲು ಮೈತ್ರಿ ಅನಿವಾರ್ಯತೆಯಿದೆ. ಕೈಪಡೆಗೆ ಮತ ಪ್ರವಾಹ ತಡೆಯಲು ಮೈತ್ರಿಯಿಂದ ಬ್ರೇಕ್ ಹಾಕಲು ಬಿಜೆಪಿ ತಂತ್ರ ರೂಪಿಸಿದೆ.
ಹೈಕಮಾಂಡ್ ಆತುರದ ನಿಲುವಿಗೆ ಕೆಲವು ರಾಜ್ಯ ನಾಯಕರು ಒಳಗೊಳಗೇ ವಿರೋಧ ವ್ಯಕ್ತಪಡಿಸಿದ್ದು, ಮೊನ್ನೆ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಎದುರೇ ಮೈತ್ರಿ ಅನಗತ್ಯ ಅಂತ ಕೆಲವರು ಅಭಿಪ್ರಾಯಪಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.