ಬೆಂಗಳೂರು: ಹಿಂದೂ ಯುವತಿಯರ ಮೇಲಿನ ದೌರ್ಜನ್ಯ ಸಂಬಂಧ ರಾಜ್ಯ ಸರಕಾರ ಮತ್ತು ಸಂಬಂಧಿತ ಜಿಲ್ಲಾಡಳಿತ ಉಗ್ರ ಕ್ರಮ ತೆಗೆದುಕೊಳ್ಳಬೇಕು. ಗ್ಯಾಂಗನ್ನು ಪತ್ತೆ ಹಚ್ಚಿ ಎಲ್ಲ ಆರೋಪಿಗಳ ವಿರುದ್ಧ ತೀವ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‍ಕುಮಾರ್ ಅವರು ಆಗ್ರಹಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯುವತಿಗೆ ಧೈರ್ಯ ತುಂಬುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕು. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರ ಭರಿಸಬೇಕು; ಇಂಥ ಘಟನೆಗಳು ಆಗದಂತೆ ಸಾಧ್ಯವಿರುವ ಎಲ್ಲ ಎಚ್ಚರಿಕೆ ಕ್ರಮಗಳನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದೂ ಯುವತಿಯರ ಮೇಲೆ ದೌರ್ಜನ್ಯ, ಅತ್ಯಾಚಾರ ಘಟನೆಗಳು ನಡೆಯುತ್ತಿದ್ದು ಇದೊಂದು ಪೂರ್ವಯೋಜಿತ ಕೃತ್ಯ ಎಂದು ಕಳವಳ ವ್ಯಕ್ತಪಡಿಸಿದರು. ಇಂಥ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ಆತಂಕಕಾರಿ ಎಂದು ನುಡಿದರು.
ಅಮಲು ಪದಾರ್ಥ ಖರೀದಿಸಿ ಯುವತಿಗೆ ನೀಡಿ ಅಪಹರಿಸಿ ದುಷ್ಕತ್ಯ ನಡೆಸಿದ್ದಾರೆ. ಇದು ಒಬ್ಬಿಬ್ಬರ ಕೃತ್ಯದಂತಿಲ್ಲ. ಇದೆಲ್ಲ ಪೂರ್ವಯೋಜಿತ. ಹಿಂದೆ ಲವ್ ಜಿಹಾದ್ ಶಬ್ದ ಬಳಸಿ ಜಾಗೃತಿ ಮಾಡುತ್ತಿದ್ದು, ಈ ಘಟನೆ ಅದಕ್ಕೆ ಥಳಕು ಹಾಕುವಂತಿದೆ ಎಂದು ತಿಳಿಸಿದರು.
ಹಿಂದೂ ಯುವತಿಯರನ್ನೇ ಗುರಿಯಾಗಿ ಮಾಡಿಕೊಂಡ ಇಂಥ ದುಷ್ಕತ್ಯಗಳ ಬಗ್ಗೆ ಒಂದು ದೊಡ್ಡ ಜನಜಾಗೃತಿ ಆಂದೋಲನವನ್ನು ಮಾಡಲು ಯೋಜಿಸಿದ್ದೇವೆ ಎಂದು ಅವರು ತಿಳಿಸಿದರು. ಯುವತಿಯರು ಆಸೆ, ಆಮಿಷಕ್ಕೆ ಬಲಿಯಾಗಿ ಪದೇಪದೇ ದುರಂತ ನಡೆಯುತ್ತಿದೆ. ಇದು ನಮ್ಮ ಸಮಾಜಕ್ಕೆ ಆತಂಕಕಾರಿ ಎಂದು ನುಡಿದರು. ಲವ್ ಜಿಹಾದ್ ವಿಚಾರದಲ್ಲಿ ದೊಡ್ಡ ಹೋರಾಟವನ್ನೂ ನಡೆಸಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಸರಕಾರವು ತನ್ನ ತಪ್ಪನ್ನು ಮುಚ್ಚಿ ಹಾಕಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಆರೋಪಗಳಿಂದ ನುಣುಚಿಕೊಳ್ಳಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ ಎಂದು ಪ್ರಶ್ನೆಗೆ ಉತ್ತರಿಸಿದರು. ರಾಜ್ಯದ ಯಾವುದಾದರೂ ಮಸೂದೆ ಮಾನ್ಯ ರಾಜ್ಯಪಾಲರಿಂದ ವಾಪಸಾದುದು ಇದೇ ಮೊದಲ ಬಾರಿಯೇ? ಹಿಂದೆ ಯಾವುದೂ ವಾಪಸ್ ಬಂದಿರಲಿಲ್ಲವೇ ಎಂದು ಅವರು ಪ್ರಶ್ನಿಸಿದರು. ವಿನಾಕಾರಣ ರಾಜ್ಯಪಾಲರನ್ನು ಟೀಕಿಸುವುದು ಸರಿಯಲ್ಲ ಎಂದು ತಿಳಿಸಿದರು.
ನಾವು ಸಂವಿಧಾನದ ರಕ್ಷಕರು ಎಂದು ಬಹಳಷ್ಟು ಭಾಷಣ ಮಾಡುತ್ತಾರೆ. ಆದರೆ, ಕಾಂಗ್ರೆಸ್ ನಿರಂತರ ಸಂವಿಧಾನ ವಿರೋಧಿ ಚಟುವಟಿಕೆಗಳನ್ನೇ ಮಾಡುತ್ತ ಬಂದಿದೆ ಎಂದು ಟೀಕಿಸಿದರು. ದಲಿತರ ಭೂಮಿ ತೆಗೆದುಕೊಂಡು ದಲಿತರಿಗೆ ಅನ್ಯಾಯ ಮಾಡಿದ್ದಾರೆ. ರಾಜ್ಯಪಾಲರನ್ನು ಅವಹೇಳನ ಮಾಡುತ್ತಿದ್ದಾರೆ. ಇವೆಲ್ಲವೂ ಸಂವಿಧಾನವಿರೋಧಿ ಲಕ್ಷಣಗಳಲ್ಲವೇ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು.