ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲು ಬರುವ ವಯಸ್ಸಾದ ವ್ಯಕ್ತಿಗಳೇ ಈತನ ಟಾರ್ಗೆಟ್..!

ಶನಿವಾರ, 25 ಫೆಬ್ರವರಿ 2023 (18:22 IST)
ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲು ಬರುವ ವಯಸ್ಸಾದ ವ್ಯಕ್ತಿಗಳೇ ಈತನ ಟಾರ್ಗೆಟ್. ಸಹಾಯ ಮಾಡುವ ನೆಪದಲ್ಲಿ ಡೆಬಿಟ್ ಕಾರ್ಡಿನ ಪಿನ್ ತಿಳಿದುಕೊಂಡು ಬಳಿಕ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ಆರೋಪಿಯನ್ನ ಈಶಾನ್ಯ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶಶಿಕುಮಾರ್ ಬಂಧಿತ ಆರೋಪಿ.
 
ಆಟೋ ಚಾಲಕನಾಗಿದ್ದ ಆರೋಪಿ ಆನ್‌ಲೈನ್ ಗೇಮ್ಸ್, ಜೂಜು, ಮೋಜುಮಸ್ತಿ ಮಾಡುತ್ತಿದ್ದ. ಇದಕ್ಕಾಗಿ ಹಣ ಹೊಂದಿಸಲು ಎಟಿಎಂ ಬಳಿ ಕಾದು ಕುಳಿತಿರುತ್ತಿದ್ದ ಆರೋಪಿ ಹಣ ವಿತ್ ಡ್ರಾ ಮಾಡಲು ಬರುವ ವೃದ್ಧರು, ಅನಕ್ಷರಸ್ಥರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಡೆಬಿಟ್ ಮಾರ್ಡಿನ ಪಿನ್ ತಿಳಿದುಕೊಳ್ಳುತ್ತಿದ್ದ. ಬಳಿಕ ತನ್ನ ಬಳಿಯಿರುವ ಬೇರೆ ಕಾರ್ಡ್ ನೀಡಿ, 'ತಾಂತ್ರಿಕ ಸಮಸ್ಯೆಯಿಂದ ಹಣ ವಿತ್ ಡ್ರಾ ಆಗುತ್ತಿಲ್ಲ' ಎಂದು ಹೇಳಿ ವಾಪಾಸ್ ಕಳಿಸುತ್ತಿದ್ದ. ಯಾಮಾರಿಸಿ ಕದ್ದ ಕಾರ್ಡಿನಲ್ಲಿ ಚಿನ್ನಾಭರಣ ಖರೀದಿಸಿ, ಅದನ್ನ ಬೇರೆಡೆಗೆ ಅಡವಿಡುತ್ತಿದ್ದ. ಅದರಲ್ಲಿ‌‌ ಬಂದ ಹಣದಿಂದ ಕುದುರೆ ರೇಸ್, ಆನ್‍ಲೈನ್ ಗೇಮ್ಸ್  ಸೇರಿದಂತೆ ಜೂಜಾಟ ಆಡುವ ಮೂಲಕ ಮೋಜು ಮಸ್ತಿ ಮಾಡುತ್ತಿದ್ದ.
 
ಆರೋಪಿಯ ಸಂಚಿಗೆ ಸಿಲುಕಿ ಹಣ ಕಳೆದುಕೊಂಡ ವ್ಯಕ್ತಿಯೊಬ್ಬರು ಸಿಇಎನ್ ಠಾಣೆಗೆ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಆರೋಪಿಯನ್ನ ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ