ಪತ್ನಿ ಜೈಲರ್ ಆಗಿರೋ ಜೈಲಲ್ಲೇ ಆರೋಪಿಗೆ ಕಂಬಿ ಎಣಿಸೋ ಕೆಲಸ

ಶನಿವಾರ, 14 ಮೇ 2022 (08:45 IST)
ಕಲಬುರಗಿ : ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಿಎಸ್‍ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಕೆಎಸ್‍ಆರ್ಪಿ ಅಸಿಸ್ಟೆಂಟ್ ಕಮಾಂಡೆಂಟ್ ಅನ್ನು ಸೇವೆಯಿಂದ ಅಮಾನತುಗೊಳಿಸಿ ಎಡಿಜಿಪಿ ಇಂದು ಆದೇಶ ಹೊರಡಿಸಿದ್ದಾರೆ. ಇದಲ್ಲದೆ ಡಿವೈಎಸ್ಪಿ ವೈಜನಾಥ್  ಜೈಲ್‍ಗೆ ಶಿಫ್ಟ್ ಆಗಿದ್ದಾರೆ.
 
ಅವರಿಗೆ ಸಿಐಡಿ ವಿವಿಧೆಡೆ ಹಣಕಾಸು ವ್ಯವಹಾರ ನಡೆಸಿದ್ದರ ಸ್ಥಳ ಮಹಜರಿಗೆಂದು ಕರೆದುಕೊಂಡು ನಗರ, ಹೊರವಲಯದ ರಿಂಗ್ ರಸ್ತೆ, ಆರ್ ಡಿ ಪಾಟೀಲ್ ಭೇಟಿ ಮಾಡಿದಂತಹ ಸ್ಥಳಗಳಿಗೆ ಕರೆದೊಯ್ದು ಮಹಜರು ಮಾಡಿದ್ದು ಕಸ್ಟಡಿ ಅಂತ್ಯಗೊಂಡಿದ್ದರಿಂದ ಜೈಲಿಗೆ ಶಿಫ್ಟ್ ಮಾಡಿದೆ.
 
ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಡಿವೈಎಸ್ಪಿ ರ್ಯಾಂಕ್‍ನ ಕೆಎಸ್ಸಾರ್ಪಿ ಸಹಾಯಕ ಕಮಾಂಡೆಂಟ್ ವೈಜನಾಥ ರೇವೂರ್ ಇವರನ್ನು ಸ್ಥಳಾಂತರಿಸಲಾಗಿದ್ದು ಅದೇ ಜೈಲಲ್ಲಿ ಇವರ ಪತ್ನಿ ಸುನಂದಾ ರೇವೂರ್ ಜೈಲರ್ ಆಗಿದ್ದಾರೆ. 
 
ಈಗಾಗಲೇ ಹಗರಣದಲ್ಲಿ ಪ್ರಮಮುಖ ಆರೋಪಿಗಳಾಗಿ ಜೈಲಲ್ಲಿರುವ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ಹೆಡ್‍ಮಾಸ್ಟರ್ ಕಾಶಿನಾಥ್ ಸೇರಿದಂತೆ ಹಲವರ ಭದ್ರತೆ ಯೋಗಕ್ಷೇಮ ಹೊಣೆ ಹೊತ್ತಿರುವ ಸುನಂದಾ ಅವರೇ ತಮ್ಮ ಡಿವೈಎಸ್ಪಿ ರ್ಯಾಂಕ್‍ನ ಪತಿಯವರನ್ನು ಜೈಲಿನ ಕಂಬಿಗಳ ಹಿಂದೆ ತಳ್ಳುವ ಅನಿವಾರ್ಯತೆ ಇಂದು ಎದುರಿಸಿದರು.
 
ಇನ್ನೊಂದೆಡೆ,  ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣ ಸಂಬಂಧ ರಾಜ್ಯ ಅಪರಾಧ ತನಿಖಾ ದಳವು  ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪರೀಕ್ಷಾ ಅಕ್ರಮ ಜಾಲದ ‘ಮಾಸ್ಟರ್‌ ಮೈಂಡ್‌’ ಎನ್ನಲಾದ ನೇಮಕಾತಿ ವಿಭಾಗದ ಹಿಂದಿನ ಡಿವೈಎಸ್ಪಿ ಶಾಂತಕುಮಾರ್‌ ಸೇರಿದಂತೆ ಇಬ್ಬರನ್ನು ಬಂಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ