ಮೀನು ಉದ್ಯಮಕ್ಕೆ ಹೊಡೆತ ನೀಡಿದ ಮಹಾಮಳೆ!

ಶನಿವಾರ, 1 ಸೆಪ್ಟಂಬರ್ 2018 (19:27 IST)
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಹಿವಾಟದ ಮೀನುಗಾರಿಕೆಗೆ ಮಹಾಮಳೆ ದೊಡ್ಡ ಹೊಡೆತವನ್ನೆ ನೀಡಿದೆ.  ಮಹಾಮಳೆ ಮತ್ತು ಕಡಲು ಪ್ರಕ್ಷುಬ್ದದಿಂದ ಕಳೆದ ಕೆಲವು ದಿನಗಳಿಂದ ಮೀನುಗಾರಿಕೆ ಕೂಡ ಸ್ಥಬ್ದವಾಗಿದೆ. ದಿನವೊಂದಕ್ಕೆ ಮಂಗಳೂರು ಮೀನುಗಾರಿಕ ಬಂದರಿನಲ್ಲಿ 52 ಕೋಟಿಯಷ್ಟು ವ್ಯವಹಾರ ನಡೆಯುತ್ತಿತ್ತು. ಎಂಟು ದಿನದ ಲೆಕ್ಕಾಚಾರ ಮಾಡಿದರೆ  ಮಹಾಮಳೆಯಿಂದ ಮೀನುಗಾರಿಕೆಗೆ  ಸುಮಾರು 400  ಕೋಟಿಯಷ್ಟು ಪೆಟ್ಟು ಬಿದ್ದಿದೆ.

ಮೀನುಗಳ ಸಂತಾನೋತ್ಪತ್ತಿ ಮತ್ತು ಕಡಲು ಪ್ರಕ್ಷುಬ್ದತೆಯಿರುವ ಕಾರಣಕ್ಕೆ ಪ್ರತಿ ವರ್ಷದಂತೆ ಜೂನ್ ಒಂದರಿಂದ ಜುಲೈ  30  ರವರೆಗೆ ಮೀನುಗಾರಿಕೆಗೆ ನಿಷೇಧವಿತ್ತು. ಆಗಷ್ಟ್  1  ರಿಂದ ಮೀನುಗಾರಿಕೆ ಆರಂಭವಾಗಿದ್ದರೂ  ಕೆಲವೇ ದಿನಗಳಲ್ಲಿ ಬಂದ ಮಹಾಮಳೆ  ಮತ್ಸೋದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಕಡಲು ಪ್ರಕ್ಷುಬ್ದತೆಯಿಂದ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಕಡಲಿನ ಪ್ರಕ್ಷುಬ್ದತೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುಮಾರು ಐದು ನೂರು ಬೋಟ್ ಗಳು  ಮಂಗಳೂರು ಬಂದರು ಮತ್ತು ನವಮಂಗಳೂರು ಬಂದರಿನಲ್ಲಿ ಲಂಗರು ಹಾಕಿತ್ತು.  ಬೋಟ್ ಗಳಿಗೆ ಸಮುದ್ರದಲ್ಲಿ ತೆರಳಲು ಅಸಾಧ್ಯವಾಗುವಂತಹ ವಾತವರಣವಿದ್ದುದರಿಂದ  ಮೀನುಗಾರಿಕೆ ಕೂಡ ಸ್ಥಬ್ದವಾಗಿತ್ತು.  
ಮೀನುಗಾರಿಕೆ ಸುಮಾರು 8 ದಿನಗಳಷ್ಟು ನಡೆಯದೆ ಇರುವುದರಿಂದ ಸುಮಾರು 400 ಕೋಟಿಯಷ್ಟು ವಹಿವಾಟಿಗೆ ಪೆಟ್ಟು ಬಿದ್ದಿದೆ ಎಂದು ಮೀನುಗಾರಿಕಾ ಇಲಾಖೆ ಸಹಾಯಕಿ ಉಪನಿರ್ದೇಶಕಿ ಸುಶ್ಮಿತಾ ರಾವ್ ತಿಳಿಸಿದ್ದಾರೆ.

 ಒಂದೆಡೆ ಮೀನುಗಾರರು ಮೀನುಗಾರಿಕೆಗೆ ತೆರಳದೆ ಸುಮಾರು ನಾಲ್ಕು ನೂರು ಕೋಟಿ ವ್ಯವಹಾರಕ್ಕೆ ಪೆಟ್ಟು ಬಿದ್ದರೆ  ಮೀನುಗಾರಿಕೆಯನ್ನೆ ಅವಲಂಬಿಸಿರುವ ಮಂಜುಗಡ್ಡೆ ಸ್ಥಾವರದ ಉದ್ಯಮ, ಮೀನು ಮಾರಾಟಗಾರರು, ಸಾರಿಗೆ ಸೇರಿದಂತೆ ಹಲವಾರು ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ