ನಾಗಮಂಗಲದಲ್ಲಿ ಕೋಮುಗಲಭೆಯೇ ಆಗಿಲ್ಲ: ಗೃಹಸಚಿವ ಜಿ ಪರಮೇಶ್ವರ್ ಅಚ್ಚರಿಯ ಹೇಳಿಕೆ

Krishnaveni K

ಗುರುವಾರ, 12 ಸೆಪ್ಟಂಬರ್ 2024 (11:30 IST)
ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಭೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಜಿ ಪರಮೇಶ್ವರ್ ಅಲ್ಲಿ ನಡೆದಿದ್ದು ಕೋಮುಗಲಭೆಯೇ ಅಲ್ಲ, ಆಕಸ್ಮಿಕ ಘಟನೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹಸಚಿವ ಜಿ ಪರಮೇಶ್ವರ್, ‘ನಾಗಮಂಗಲದಲ್ಲಿ ಕೋಮುಗಲಭೆ ನಡೆದಿಲ್ಲ. ಇದೊಂದು ಆಕಸ್ಮಿಕ ಘಟನೆ. ಯಾರೋ ಕಲ್ಲು ತೂರಾಟ ನಡೆಸಿದ್ದಾರೆ. ಒಬ್ಬರಿಗೊಬ್ಬರು ಘರ್ಷಣೆ ಮಾಡಿಕೊಂಡಿದ್ದಾರೆ. ಇದರಲ್ಲಿ ರಾಜಕೀಯ ಮಾಡಬೇಡಿ’ ಎಂದು ಹೇಳಿಕೆ ನೀಡಿದ್ದಾರೆ.

ಗೃಹಸಚಿವರ ಹೇಳಿಕೆ ಮತ್ತೆ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಲಿದೆ. ಕಲ್ಲು ತೂರಾಟದ ಬಳಿಕ ಅನ್ಯಕೋಮಿನ ಯುವಕರು ಅಷ್ಟಕ್ಕೇ ಸುಮ್ಮನಾಗದೇ ಪೆಟ್ರೋಲ್ ಬಾಂಬ್ ಎಸೆದು, ಬೆಂಕಿ ಹಚ್ಚಿ ದಾಂಧಲೆ ಮಾಡಿದ್ದಾರೆ. ಆದರೆ ಗೃಹಸಚಿವರು ಇದೊಂದು ಆಕಸ್ಮಿಕ ಘಟನೆ ಎಂದಿರುವುದು ಅಚ್ಚರಿ ತಂದಿದೆ.

ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆ ಸಂಬಂಧ 52 ಜನರನ್ನು ಬಂಧಿಸಲಾಗಿದೆ. ಘಟನೆ ವೇಳೆ ಓರ್ವ ಎಎಸ್ಐಗೆ ಗಾಯವಾಗಿದೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಪರಮೇಶ್ವರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ