ಆಪರೇಷನ್ ಆಡಿಯೋ ಪ್ರಕರಣ ಗಂಭೀರ ಎಂದ ಗೃಹ ಸಚಿವ

ಶನಿವಾರ, 23 ಫೆಬ್ರವರಿ 2019 (17:04 IST)
ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿ ಎಸ್.ಐ.ಟಿ ತನಿಖಾ ತಂಡ ರಚನೆ ಒಂದಷ್ಟು ವಿಳಂಬವಾಗುತ್ತಿದೆ. ಹಾಗೆಂದು ಸರ್ಕಾರ ಪ್ರಕರಣವನ್ನು ಹಗುರವಾಗಿ ಪರಿಗಣಿದೆ ಎಂದರ್ಥವಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಕಲಬುರ್ಗಿಗೆ ಆಗಮಿಸಿದ ಸಂದರ್ಭ ಮಾತನಾಡಿದ ಅವರು, ತನಿಖೆಗೆ ಸೂಕ್ತ ತಂಡವನ್ನು ಸಿದ್ಧತೆ ಮಾಡುತ್ತಿದೆ. ಎಸ್.ಐ.ಟಿ. ತನಿಖೆಗೆ ಮುಖ್ಯಮಂತ್ರಿ ನಿರಾಸಕ್ತಿ ಎಂಬ ವಿಚಾರ ಆಧಾರ ರಹಿತವಾದದ್ದು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಒಪ್ಪಿ ಎಸ್.ಐ.ಟಿ. ತನಿಖೆಗೆ ಆದೇಶಿಸಿದ್ದಾರೆ. ಎಸ್.ಐ.ಟಿ.ಗೆ. ಸಿಎಂ ವಿರೋಧ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ ಎಂದರು. ಅಪರೇಷನ್ ಆಡಿಯೋ ಘಟನೆಗೆ ಸಂಬಂಧಿಸಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದ ತನಿಖೆಗೆ ಕಲಬುರ್ಗಿ ಹೈಕೋರ್ಟ್ ಪೀಠ ತಾತ್ಕಾಲಿಕ ತಡೆಯಜ್ಞೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ, ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿರುವುದಕ್ಕೂ ಎಸ್.ಐ.ಟಿ. ತನಿಖೆಗೂ ಸಂಬಂಧವಿಲ್ಲ. ಎಸ್.ಐ.ಟಿ. ತನಿಖೆಯೇ ಬೇರೆಯಾಗಿದೆ. ಶೀಘ್ರವೇ ಎಸ್.ಐ.ಟಿ. ತನಿಖೆ ಪ್ರಾರಂಭಗೊಳ್ಳಲಿದೆ ಎಂದರು. ಯಡಿಯೂರಪ್ಪ ಅವರು ಅಪರೇಷನ್ ಆಡಿಯೋದಲ್ಲಿರುವ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ.

ಅಲ್ಲದೆ ಹೈಕೋರ್ಟ್ ನಲ್ಲಿ ಅವರ ಪರ ವಕೀಲರು 10 ಕೋಟಿ ರೂಪಾಯಿ ಲಂಚವಲ್ಲ, ಚುನಾವಣೆ ಖರ್ಚಿಗಾಗಿ ಎಂದು ಹೇಳಿದ್ದಾರೆ. ಚುನಾವಣಾ ಆಯೋಗ ವಿಧಾನಸಭೆ ಚುನಾವಣೆಗೆ 25 ವೆಚ್ಚದ ಮಿತಿ ಹಾಕಿದೆ. ಹೀಗಿರಬೇಕಾದರೆ 10 ಕೋಟಿ ರೂಪಾಯಿ ಚುನಾವಣಾ ವೆಚ್ಚಕ್ಕಾಗಿ ಮುಂಗಡವಾಗಿ ಕೊಡುತ್ತಾರೆ ಎಂದರೆ ಅದರರ್ಥ ಉಳಿದ 9.75 ಕೋಟಿ ರೂಪಾಯಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಒಡ್ಡಿದ ಆಮಿಷದ ಹಣ ಎಂದು ಪಾಟೀಲ ಅಭಿಪ್ರಾಯಪಟ್ಟರು. ನ್ಯಾಯಾಲಯದ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಮುಂದಿನ ದಿನಗಳಲ್ಲಿ ಅದರ ವಿಚಾರಣೆ ನಡೆಸಲಿದೆ ಎಂದರು. 



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ