ಹನಿಟ್ರ್ಯಾಪ್: ಚಾಲಾಕಿ ಮಹಿಳೆ ಬಂಧನ
ಶನಿವಾರ, 26 ಜನವರಿ 2019 (17:27 IST)
ಫೇಸ್ ಬುಕ್ ನಲ್ಲಿ ಪರಿಚಮ ಮಾಡಿಕೊಂಡು ಹನಿಟ್ರ್ಯಾಪ್ ಮೂಲಕ ಉದ್ಯಮಿಗೆ ವಂಚಿಸಿದ್ದ ಮಹಿಳೆ ಸೇರಿ ಮೂವರನ್ನು ಬಂಧಿಸಲಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮೂಲದ ಹನಿಟ್ರ್ಯಾಪ್ ಸುಂದರಿ ಸೇರಿ ಇಂಡಿಯ ವಿಠ್ಠಲ ವಡ್ಡರ್, ಮುರುಘೇಶ ಉಳ್ಳಾಗಡ್ಡಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಇವರು ವಿಜಯಪುರದ ಉದ್ಯಮಿ ಸುನೀಲ್ ಪಾಟೀಲ್ ಜೊತೆ ಫೇಸ್ ಬುಕ್ ನಲ್ಲಿ ಸ್ನೇಹ ಬೆಳೆಸಿ ನಂಬರ್ ಪಡೆದು ಹನಿಟ್ರ್ಯಾಪ್ ಮಾಡಿ ವಂಚನೆ ಮಾಡಿದ್ದರು.
ಉದ್ಯಮಿ ಸುನೀಲ ಪಾಟೀಲ ಅವರನ್ನು ಇಂಡಿಯಲ್ಲಿದ್ದ ತನ್ನ ಸ್ನೇಹಿತೆಯ ಬ್ಯೂಟಿ ಪಾರ್ಲರ್ ಗೆ ಕರೆಯಿಸಿತ್ತು. ಸುನೀಲ ಪಾಟೀಲ ಮಹಿಳೆಯೊಂದಿಗಿದ್ದಾಗ ದಾಳಿ ನಡೆಸಿ ಬೆದರಿಕೆ ಹಾಕಿದ್ದ ಕಿಲಾಡಿಗಳು “ನಾವು ಮಾಧ್ಯಮದವರು ನಿನ್ನ ವಿಡಿಯೋ ಪ್ರಸಾರ ಮಾಡುತ್ತೇವೆ” ಎಂದು ಹೆದರಿಸಿ 24ಸಾವಿರ ನಗದು, ಚಿನ್ನದ ಚೈನ್, ಚಿನ್ನದ ಕಡಗ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಸುನೀಲ ಪಾಟೀಲ ಇಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರು ಸಲ್ಲಿಸಿದ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.